Samskrt Farmer

Samskrt Farmer Contact information, map and directions, contact form, opening hours, services, ratings, photos, videos and announcements from Samskrt Farmer, Language school, Mangalore.

03/06/2023

(ಕಳೆದ ಮೂರುವರ್ಷದ ಸತತ ಪ್ರಯತ್ನದ ನಂತರ ನಮ್ಮ ಸಂಸ್ಕೃತ ಕಲಿಕೆಯ ಪ್ರಯತ್ನವು ಒಂದು ರೂಪ ಪಡೆಯುತ್ತಿದೆ. ಇದು ಇನ್ನಷ್ಟು ಹರಡಲಿ, ಈ ಮಾದರಿಯನ್ನು ಇನ್ನಷ್ಟು ಮಂದಿ ಅನುಸರಿಸಲಿ ಎಂದು ಸಂಸ್ಕೃತದ ಬಗೆಗಿನ ಬಹಳ ಗೌರವ, ಕಾಳಜಿ, ಪ್ರೀತಿಯಿಂದ ಈ ಲೇಖನವನ್ನು ಬರೆಯುತ್ತಿದ್ದೇನೆ; ಹೊರತು ಯಾವುದೇ ತೋರಿಕೆ, ಪ್ರದರ್ಶನಕ್ಕಾಗಿ ಅಲ್ಲ.)

ಭಾರತೀಯ ಸನಾತನ ಸಂಸ್ಕೃತಿಯು ಒಂದು ರುಚಿಯಾದ ಜ್ಯೂಸ್ ಎಂದು ಪರಿಗಣಿಸಿದರೆ ಸಂಸ್ಕೃತ ಭಾಷೆಯು ಅದನ್ನು ಹೀರಲು ಇರುವ ಸ್ಟ್ರಾ(straw) ಎಂದು ನನಗೆ ಮನದಟ್ಟಾಗಿದೆ. ಶಿಲ್ಪ, ನೃತ್ಯ, ಯಕ್ಷಗಾನದಂಥ ಕಲೆ, ಸಾಹಿತ್ಯ, ಶಾಸ್ತ್ರೀಯ ಸಂಗೀತ, ವೇದಮಂತ್ರಗಳು, ಸ್ಥಳನಾಮಗಳು, ಎಲ್ಲ ಭಾರತೀಯ ಭಾಷೆಗಳು - ಇವೆಲ್ಲವನ್ನು ಏಕಕಾಲದಲ್ಲಿ ಗ್ರಹಿಸಲು, ಚೆನ್ನಾಗಿ ಅರ್ಥೈಸಲು ಸಂಸ್ಕೃತವು ಬಹಳ ಪ್ರಬಲವಾದ ಸಾಧನವಾಗಿದೆ. ಇದು ಹೇಗೆಂದು ನಾನು ಸೋದಾಹರಣವಾಗಿ ಬೇರೊಂದು ಲೇಖನದಲ್ಲಿ ವಿವರಿಸುವೆ. ಸದ್ಯಕ್ಕೆ ಸಂಸ್ಕೃತ ತಿಳಿಯದವರು ಸಂಸ್ಕೃತವನ್ನು ಹೇಗೆ ಕಲಿಯಬಹುದು? ಎಂಬುದನ್ನು ಸ್ಥೂಲವಾಗಿ ಇಲ್ಲಿ ಬರೆದಿದ್ದೇನೆ. ಆಕಾಶವನ್ನು ನೋಡವುದು ಹೀಗೆ ಎಂದು ಯಾರಿಗೂ ಹೇಳಿಕೊಡಬೇಕಿಲ್ಲ. ಇಲ್ಲಿರುವುದು ಒಂದೇ ದಾರಿ ಎಂದಲ್ಲ. ಆದರೆ ಇದು ನಾನು ನಡೆದ ದಾರಿಯಷ್ಟೆ.

೧) ಮೊದಲಾಗಿ ಯಾವುದೇ ಪೂರ್ವ ಕಲಿಕೆ ಇಲ್ಲದೆ ಈಗ ಸಂಸ್ಕೃತ ಕಲಿಯುವುದು ಹೇಗೆ?
ಮೊದಲಾಗಿ ನಾವು ಮನೆಯಲ್ಲಿ ಕನಿಷ್ಠ ಇಬ್ಬರು ಸಂಸ್ಕೃತ ಕಲಿಕೆಗೆ ಅಚಲ ನಿಷ್ಠೆಯಿಂದ ತೊಡಗಬೇಕು. ಗಂಡಹೆಂಡಿರು ಇದರಲ್ಲಿ ತೊಡಗಿದರೆ ಒಳ್ಳೆಯದು. ಆಮೇಲೆ ಇಡಿಯ ಮನೆಗೆ ಇದನ್ನು ಸುಲಭವಾಗಿ ಹಬ್ಬಿಸಬಹುದು. ಇಬ್ಬರು ಇದರಲ್ಲಿ ಆಸಕ್ತಿಯಿಂದ ಕಲಿತರೆ ಮನೆಯ ಇತರೆಲ್ಲರು ಯಾವುದೇ ಪ್ರಯತ್ನವಿಲ್ಲದೆ ಸಂಸ್ಕೃತ ಕಲಿಯಬಹುದು (ಈ ಮೇಲಿನ ವಿಡಿಯೋ ಇದಕ್ಕೆ ಸಾಕ್ಷಿ).

ಸಂಸ್ಕೃತಭಾರತಿ ಎಂಬ ಒಂದು ಹೆಮ್ಮರದಂಥ ಸಂಸ್ಥೆ ಇದೆ. ಇದಕ್ಕೆ ಆನ್ಲೈನ್ ನೋಂದಣಿ ಮಾಡಿಸಿಕೊಳ್ಳಿ(https://samskritabharati.in/correspondence_courses). ನಾನು ಸಂಸ್ಕೃತ ಭಾರತಿಯವರ ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ - ಈ ನಾಲ್ಕು ಪರೀಕ್ಷೆಗಳನ್ನು ಬರೆದು ಮೇಲ್ಸ್ತರದ ಸಂಸ್ಕೃತ ವ್ಯಾಕರಣದ ಪರಿಚಯ, ಸಂಭಾಷಣೆಗೆ ಬೇಕಾದ ಪರಿಕರಗಳ ಸಂಗ್ರಹಣೆ ಮಾಡಿಕೊಂಡೆ. ಈ ಮಧ್ಯೆ ನನ್ನ ಪತ್ನಿಯೂ ಪ್ರವೇಶ ಪರೀಕ್ಷೆಯನ್ನು, ಅಮ್ಮ ಮತ್ತು ಅಣ್ಣ ಪ್ರವೇಶ ಮತ್ತು ಪರಿಚಯಗಳನ್ನು ಮುಗಿಸಿಕೊಂಡರು.
ನನ್ನ ಮಕ್ಕಳಿಗೆ ಸಂಸ್ಕೃತ ಕಲಿಸಬೇಕೆಂಬುದು ನನ್ನ ಇಡಿಯ ಸಂಸ್ಕೃತಕಲಿಕಾ ಆಸಕ್ತಿಯ ಮೂಲಸೆಳೆತವಾಗಿತ್ತು. ಇದಕ್ಕಾಗಿ ನನ್ನ ಮಗ ಪ್ರಚೇತ (ಆಗ ಐದನೆಯ ತರಗತಿ) ನನ್ನು ಇದರಲ್ಲಿ ತೊಡಗಿಸಿಕೊಂಡೆ(ಅವನೀಗ ಸರಳ ಸಂಸ್ಕೃತದಲ್ಲಿ ಬೇರೆ ಭಾಷೆಯ ಸಹಾಯ ಇಲ್ಲದೆ ಸಂಭಾಷಿಸಬಲ್ಲ). ಸಂಸ್ಕೃತದ ಮಹತ್ವವೇನು? ಎಂಬುದನ್ನು ಮತ್ತೆ ಮತ್ತೆ ಅವನಿಗೆ ತಿಳಿಹೇಳುತ್ತಿದ್ದೆ. ಸಂಸ್ಕೃತದ ವ್ಯಾಕರಣದ ಅಂಶವನ್ನು ನನ್ನಂತೆ ಅವನು ಕಷ್ಟಪಟ್ಟು ಕಲಿಯಬೇಕಾಯ್ತು. ಇದರಲ್ಲಿ ಅವನು ನನಗೆ ಬಹಳ ಸಹಕಾರ ನೀಡಿದ. ನಿಮ್ಮ ಪತಿ/ಪತ್ನಿ ಇದರಲ್ಲಿ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಂಡರೆ ಮಕ್ಕಳಿಗೆ ಈ ತೊಂದರೆಯನ್ನು ಕೊಡಬೇಕಿಲ್ಲ. (ಮಕ್ಕಳು ಪ್ರಯತ್ನವಿಲ್ಲದೆ ಕಲಿಯುವ ವಾತಾವರಣ ನಿರ್ಮಾಣ ಮಾಡಲು ಸಾಧ್ಯ)

೨) ಸಂಸ್ಕೃತ ಭಾರತಿಯ ಪರೀಕ್ಷೆಗಳನ್ನು ಬರೆದ ಬಳಿಕವೂ ನಮಗೆ ಸಂಭಾಷಣೆ ಸುಲಲಿತವೇನೂ ಆಗುವುದಿಲ್ಲ. ಇದು ಹೇಗೆಂದರೆ ಅಡುಗೆ ಮಾಡಲು ಬೇಕಾದ ಎಲ್ಲ ಉಪ್ಪು, ಮೆಣಸು, ಖಾರ, ಹುಳಿಗಳನ್ನು ಪಕ್ಕ ಇಟ್ಟುಕೊಂಡರೂ ಅದನ್ನು ಬಳಸುವುದು ಹೇಗೆಂಬುದು ಪಾಚಕನ ಬುದ್ಧಿಮತ್ತೆಯ ಮೇಲೆ ನಿರ್ಧೃತವಾಗುವಂತೆ ವ್ಯಾಕರಣ ಜ್ಞಾನಮಾತ್ರದಿಂದ ಸಂಭಾಷಣೆ ಪಟಪಟನೆ ಬರುವುದಿಲ್ಲ. ಇದಕ್ಕೆ ನಾನು ಆಯ್ದುಕೊಂಡ ದಾರಿ 'ಸ್ವಗತ ಸಂಭಾಷಣೆ'. ಸ್ವಗತ ಸಂಭಾಷಣೆ ಮಾಡುವಾಗ ನಾಚಿಕೆ ಅಡ್ಡಬರುವುದಿಲ್ಲ. ತತ್ಕ್ಷಣ ಉತ್ತರಿಸಬೇಕಾದ ಒತ್ತಡ ಇರುವುದಿಲ್ಲ. ನಮ್ಮೆದುರು ಇತರರು ಮಾತನಾಡುತ್ತಿದ್ದರೆ ಅವರ ಮಾತುಗಳನ್ನು ಮನಸ್ಸಿನಲ್ಲೇ ಅನುವಾದಿಸುವುದು ಒಂದು ಒಳ್ಳೆಯ ದಾರಿ. ನನ್ನ ಪತ್ನಿ 'ಏನಿದು ಇದನ್ನೆಲ್ಲಾ ಇಲ್ಲೇ ಎಸೆದು ಹೋಗಿದ್ದೀರಿ? ಒತ್ತರೆ ಮಾಡಿ ಇಡಿ ಎಂದು ಹೇಳಿದ್ದೆನಲ್ಲಾ' ಎಂದು ಮಕ್ಕಳನ್ನು ಜೋರು ಮಾಡಿದರೆ 'ಕಿಮೇತತ್, ಸರ್ವಮ್ ಅತ್ರೈವ ಕ್ಷಿಪ್ತ್ವಾ ಗತವಂತಃ? ಸಮೀಕರೋತು, ಸ್ವಸ್ಥಾನೇ ಸ್ಥಾಪಯತು ಇತಿ ಉಕ್ತಂಖಲು ಮಯಾ' ಎಂದು ಇತರರ ವಾಕ್ಯಗಳನ್ನು ಅನುವಾದಿಸಿದರೆ ಕೋಪ, ದುಃಖ, ಸಂತಸ ಇತ್ಯಾದಿ ಎಲ್ಲಾ ರಸಗಳಲ್ಲೂ ವಾಕ್ಯಗಳನ್ನು ವ್ಯಕ್ತಪಡಿಸುವುದು ಹೇಗೆಂಬುದು ನಮಗೆ ತಿಳಿಯುತ್ತದೆ.

೩) ನಮಗೆ ದೊಡ್ಡವರಿಗೆ ನಮ್ಮ ಅಲ್ಪಜ್ಞಾನವನ್ನು ಮನೆಯವರೆದುರು ಪ್ರದರ್ಶಿಸುವ ಆಕಾಂಕ್ಷೆ ಇದ್ದೇ ಇರುತ್ತದೆ. ಆದ್ದರಿಂದ ನಾವು ಮನೆಬಳಕೆಯ ಹಾಲು, ಮೊಸರು, ಅನ್ನ, ಫ್ಯಾನು, ಅಂಗಿ ಪ್ಯಾಂಟು ಇವನ್ನೆಲ್ಲ ಸಂಸ್ಕೃತದಲ್ಲಿ ಬಳಸಲು ಶುರು ಮಾಡುತ್ತೇವೆ. ಆಗ ಮನೆಯಲ್ಲಿ ಅಬಾಲವೃದ್ಧರಿಗೂ ಈ ಶಬ್ದಗಳು ಪರಿಚಯವಾಗುತ್ತಾ ಹೋಗುತ್ತವೆ. ಪುಟ್ಟಪುಟ್ಟ ವಾಕ್ಯಗಳ ಮೂಲಕ ಮಕ್ಕಳು, ಮನೆಯವರು ಸಂಸ್ಕೃತ ವ್ಯಾಕರಣದ ಪಾಠವಿಲ್ಲದೆ ಸುಲಭವಾಗಿ ಕಲಿಯಲು ಶುರುಮಾಡುತ್ತಾರೆ. ಮೊದಲೇ ಹೇಳಿದಂತೆ ಇಬ್ಬರು ಇದಕ್ಕಾಗಿ ಅಚಲನಿಷ್ಠೆಯಿಂದ ತೊಡಗಿದರೆ (ಕನಿಷ್ಥ ಒಬ್ಬ) ಉಳಿದವರಿಗೆ ದಾರಿ ಸುಗಮವಾಗುತ್ತದೆ.

೪) ಇಷ್ಟೆಲ್ಲ ಆದಮೇಲೂ ಕ್ರಿಯಾಪದಗಳ ಕೊರತೆ ಕಾಡುತ್ತದೆ. ಅದಕ್ಕಾಗಿ ಒಮ್ಮೆ ಪಾಣಿನೀಯ ಧಾತುಪಟ್ಟಿಯನ್ನು ಪೂರ್ತಿ ನೋಡಿ ಅಗತ್ಯ ಧಾತುಗಳ ಪಟ್ಟಿಯನ್ನು ನಾನೇ ತಯಾರಿಸಿದ್ದೇನೆ. ಇಷ್ಟನ್ನು ಕಲಿತರೆ (https://tinyurl.com/dhatukoshtaka) ತಕ್ಕಮಟ್ಟಿಗೆ ಸಾಕಾಗುತ್ತದೆ. ಈ ಲಿಂಕ್ ನಲ್ಲಿರುವ ಪಟ್ಟಿಯ ಪ್ರಿಂಟ್ ಔಟ್ ಇಟ್ಟುಕೊಂಡು ಪ್ರತಿನಿತ್ಯ ಓದಿರಿ.

೫) ಕೊನೆಯದಾಗಿ 'ರಾಮಾಯಣ ಓದಿ ಸಂಸ್ಕೃತ ಶ್ರೀಮಂತಗೊಳಿಸಿ'. ಇನ್ನಂತೂ ಶೀಘ್ರವಾಗಿ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ ನಡೆಯಲಿದೆ. ರಾಮಾಯಣ ಓದಲು ಇದು ಸುಸಮಯ. ವಾಲ್ಮೀಕಿಯ ಆದಿಕಾವ್ಯ ರಾಮಾಯಣವನ್ನು ಸಂಸ್ಕೃತದಲ್ಲೇ ಓದುವುದು ಇನ್ನಷ್ಟು ಶ್ರೇಯಸ್ಕರ. ರಾಮಾಯಣವನ್ನು ಓದಿ ಕಷ್ಟಶಬ್ದಗಳನ್ನು, ಉಪಸರ್ಗ ಸಹಿತ ಶಬ್ದಗಳನ್ನು ನೋಟ್ ಮಾಡಿಕೊಳ್ಳುತ್ತಾ ಅವನ್ನು ಮತ್ತೆ ಮತ್ತೆ ಮನನ ಮಾಡುತ್ತಾ ಓದಿದರೆ ಬಾಲಕಾಂಡ ಮುಗಿಸಿ ಅಯೋಧ್ಯಾಕಾಂಡಕ್ಕೆ ಬರುತ್ತಲೂ ರಾಮಾಯಣವನ್ನು ಸರಾಗವಾಗಿ ಓದುವ ಶಕ್ತಿ ಬರುತ್ತದೆ. ಬಹಳ ಸುಂದರ ಶಬ್ದಗಳಿಂದ, ಉಪಸರ್ಗಸಹಿತ ಪದಗಳಿಂದ ಚೆನ್ನಾಗಿ ಮಾತನಾಡಲೂ ಅಭ್ಯಾಸವಾಗುತ್ತದೆ.

೬) ಈ ಇಡಿಯ ಪ್ರಕ್ರಿಯೆಯನ್ನು ಒಂದು open activity ಆಗಿ ಮನೆಮಂದಿಯೆದುರು ಬಿಚ್ಚಿಟ್ಟು ನಡೆಸಿದರೆ ಮನೆಯವರನ್ನು, ಮುಖ್ಯವಾಗಿ ಮಕ್ಕಳನ್ನು ಯಾವುದೇ ಕಷ್ಟವಿಲ್ಲದೆ ಸಂಸ್ಕೃತ ಸಂಭಾಷಕರನ್ನಾಗಿಸುವುದು ಸಾಧ್ಯ. ಇದು ನಾವು ಅವರಿಗೆ ಕೊಡಬಹುದಾದ ಒಂದು ಅತ್ಯಮೂಲ್ಯ ಕೊಡುಗೆ. ಪ್ರತೀದಿನ ನಮ್ಮನ್ನು ಶ್ರೀಮಂತಗೊಳಿಸುವ, ಕಳೆಯಲಾಗದ, ಕದಿಯಲಾಗದ ವಿದ್ಯಾಧನವನ್ನು ಕೂಡಿಡುವ ಒಂದು ಆಹ್ಲಾದಕರ ಚಟುವಟಿಕೆ.

Address

Mangalore

Website

Alerts

Be the first to know and let us send you an email when Samskrt Farmer posts news and promotions. Your email address will not be used for any other purpose, and you can unsubscribe at any time.

Shortcuts

Share