02/06/2025
ಕಾಯಕ ದಾಸೋಹ ನಂಬಿದ ಮೋಳಿಗೆ ಮಹಾದೇವಿ
-ಸುನಂದಾ ಕಡಮೆ
ಶರಣ ಪರಂಪರೆಯ ವಚನಗಳ ಜಗತ್ತಿನಲ್ಲಿ ನಾವು ಮಹಾದೇವಿ ಅಕ್ಕನನ್ನು ಹೆಚ್ಚು ಹೆಚ್ಚು ಕೇಳಿದ್ದೇವೆ, ಆದರೆ ಇನ್ನೊಬ್ಬ ಮಹಾದೇವಿಯು ವಚನಗಳ ಕೃಷಿಯಲ್ಲಿ ಹೆಸರು ಮಾಡಿದ್ದು ಹೆಚ್ಚು ಮುನ್ನಲೆಗೆ ಬಂದಿಲ್ಲ, ಅವಳೇ ಮೋಳಿಗೆ ಮಹಾದೇವಿ.
ಈ ವಚನಕಾರ್ತಿಯು ವಚನಕಾರ ಮೋಳಿಗೆ ಮಾರಯ್ಯನ ಪತ್ನಿಯೂ ಹೌದು. ಮೋಳಿಗೆ ಮಹಾದೇವಿಯವರು ಹನ್ನೆರಡನೇ ಶತಮಾನದ ಹೊತ್ತಿನಲ್ಲಿ ಕಾಶ್ಮೀರದ ಮಾಂಡವ್ಯಪುರ ಎಂಬ ದೇಶವನ್ನು ಆಳುತ್ತಿದ್ದ ಮಹಾರಾಜ ಮಹಾದೇವ ಭೂಪಾಲನ ಪತ್ನಿ, ಇವರ ಮೊದಲಿನ ಹೆಸರು ರಾಣಿ ಗಂಗಾದೇವಿ.
ಆ ಸಮಯದಲ್ಲೇ ನಮ್ಮ ಕಲ್ಯಾಣದಲ್ಲಿ ಬಸವಣ್ಣನವರ ಮುಂದಾಳತ್ವದೊಂದಿಗೆ ಮನುಕುಲದ ಉದ್ದಾರ ಮಾಡುವ 'ಮಹಾಮಣಿಹ' ನಡೆದಿತ್ತು.
ಶರಣರ ಮಾನವೀಯ ಮೌಲ್ಯಗಳು, ಆಧ್ಯಾತ್ಮದ ಹಂಬಲ, ಮೃದು ವಚನಗಳನ್ನಾಡುವ ಅವರ ಸಾತ್ವಿಕ ನಡವಳಿಕೆಗಳನ್ನು ಕಂಡು, ಮರುಳಾಗಿ, ಅನೇಕ ಜನರು ಈ ಶರಣ ಚಳುವಳಿಗೆ ಶರಣಾಗಿದ್ದರು. ಮತ್ತು ಜಂಗಮರ ಕಾಲ್ನಡಿಗೆಯ ಪ್ರವಾಸದಿಂದ ಇದು ಕಾಶ್ಮೀರದವರೆಗೂ ಹರಡಿತ್ತು.
ಆಗಲೇ ಅಲ್ಲಿಯ ಮಾಂಡವ್ಯಪುರದ ರಾಜ ದಂಪತಿಗಳು ಈ ವಿಷಯಗಳಿಂದ ಸ್ಪೂರ್ತಿ ಪಡೆದು ತಮ್ಮ ಅರಮನೆಯಲ್ಲೇ ದಾಸೋಹವನ್ನು ನಡೆಸಲಾರಂಭಿಸಿದ್ದರು.
ಆ ಸಮಯದಲ್ಲೇ ಅವರಲ್ಲಿಗೆ ಹೋದ ಶರಣರೊಬ್ಬರು 'ನಿಮ್ಮ ಸ್ವಂತ ದುಡಿಮೆಯ ಹಣದಿಂದ ಮಾತ್ರ ನನ್ನನ್ನು ಉಪಚರಿಸಬೇಕು, ಸ್ವಂತ ದುಡಿಮೆಯ ಹಣದಿಂದ ಮಾಡಿದ ಸೇವೆಯೇ ಸಾರ್ಥಕವಾದಂತಹ ಪೂಜೆ, 'ನಿನ್ನ ಕಾಣಿಕೆಯಲ್ಲಿ ನಿಮ್ಮ ಕಾಯ-ಕಷ್ಟದ ಬೆವರು ಅಂಟಿರಬೇಕು' ಎಂದು ಹೇಳಿ ಅವರ ಕಣ್ಣು ತೆರೆಸುತ್ತಾರೆ.
ಶರಣರ ಈ ಶರತ್ತಿಗೆ ತಲೆಬಾಗಿ, ರಾಜ ಮಹಾದೇವ ಭೂಪಾಲನು ಪತ್ನಿ ಗಂಗಾದೇವಿಯೊAದಿಗೆ ಮಾರುವೇಷದಲ್ಲಿ ಕಮ್ಮಾರನೊಬ್ಬನ ಬಳಿ ಕೂಲಿ ಮಾಡಿ, ಅದಕ್ಕೆ ಪ್ರತಿಯಾಗಿ ಬಂದ ಹಣದಿಂದ ಜಂಗಮರಿಗೆ ದಾಸೋಹವನ್ನು ನೀಡುವ ಪ್ರಸಂಗವೂ ಎದುರಾಗುತ್ತದೆ.
ಆ ಕಾಯಕದಿಂದ ರಾಜ-ರಾಣಿಯರ ಒಳಗಣ್ಣು ತೆರೆದು, ವೈರಾಗ್ಯವು ಅವರ ತನುಮನಗಳನ್ನು ಆವರಿಸಿ, ಅವರು ಜಗತ್ತನ್ನು ನೋಡುವ ದೃಷ್ಟಿಯೇ ಬದಲಾಗಲು ಒಂದು ಮೆಟ್ಟಿಲಾಯಿತು ಅನ್ನಬಹುದು.
ನಮ್ಮ ಶರಣರು ಅಂಧಶೃದ್ಧೆ, ಶೋಷಣೆ, ಅರ್ಥಹೀನ ಸಂಪ್ರದಾಯ, ದೇವಾಲಯ ಸಂಸ್ಕೃತಿ ಮತ್ತು ಪುರೋಹಿತಶಾಹಿ ವ್ಯವಸ್ಥೆಗಳ ವಿರುದ್ಧ ದನಿಯೆತ್ತಿದ್ದಷ್ಟೇ ಅಲ್ಲದೇ ಇವೆಲ್ಲದರ ವಿರುದ್ಧ ಸಿಡಿದೆದ್ದ ವಿಷಯಗಳೆಲ್ಲವೂ ಆ ದಂಪತಿಗಳ ಮನಸ್ಸಿನಲ್ಲಿ ಹೊಸ ವಿಚಾರಧಾರೆಗಳನ್ನೇ ಹುಟ್ಟುಹಾಕಲು ಕಾರಣವಾಯಿತು.
ಯಾವುದೇ ಪವಾಡಗಳಿಂದಲ್ಲದೇ ನಮ್ಮ ಶರಣರು ತಮ್ಮ ಅಂತಃಸತ್ವದಿಂದಲೇ ದೊಡ್ಡವರೆನಿಸಿಕೊಂಡದ್ದು ಅವರಿಗೆ ಬಹು ಅಪರೂಪದ ಸಂಗತಿಯೆನಿಸಿತು.
ಮುಂದೆ ಕಾಶ್ಮೀರದ ಮಾಂಡವ್ಯಪುರದ ಆ ರಾಜಸತ್ತೆಯು ಜಂಗಮರ ದಾಸೋಹದ ಕೇಂದ್ರಬಿಂದುವೇ ಆಗಿ ಹೋಯಿತು, ಆ ಸಮಯದಲ್ಲೇ ನಮ್ಮ ಶರಣರ ಭಾಷೆಯನ್ನು ಕೂಡ ಕಲಿತುಕೊಂಡ ರಾಜ ದಂಪತಿಗಳು ಆಗಲೇ ಕೆಲವು ವಚನಗಳನ್ನು ಕೂಡ ರಚಿಸಿದರು ಎಂಬ ಪ್ರತೀತಿ ಇದೆ. ಮುಂದೆ ಹೋದಂತೆ ಕಲ್ಯಾಣದೆಡೆ ಆ ದಂಪತಿಗಳ ಅಂತರಂಗ ಸೆಳೆಯತೊಡಗುತ್ತದೆ.
ಇಲ್ಲಿಯ ಕಲ್ಯಾಣ ದ ಶರಣ ಚಳುವಳಿಯ ಬಗ್ಗೆ ತಿಳಿದ ಮೇಲೆ ಕಲ್ಯಾಣದವರಷ್ಟೇ ಅಲ್ಲ ದೇಶದ ಇನ್ನೂ ನಾನಾ ಭಾಗದ ಜನರು ಬಸವಣ್ಣನವರ ಕೈಯನ್ನು ಬಲಪಡಿಸಿದರು ಮತ್ತು ನೈತಿಕ ಸ್ತೖರ್ಯವನ್ನು ಹೆಚ್ಚಿಸಲು ಮುಂದೆ ಬಂದರು ಎಂಬುದನ್ನು ನಾವೆಲ್ಲ ಕೇಳಿದ್ದೇವೆ.
ಹೀಗೆ ಅಷ್ಟಭೋಗಗಳನ್ನು ಅನುಭವಿಸುತ್ತ ದೇಶವನ್ನಾಳುವ ಅನೇಕ ರಾಜ-ಮಹಾರಾಜರೂ ಸಹ ತಮ್ಮ ಸಕಲ ವೈಭವವನ್ನು ತ್ಯಜಿಸಿ ಕಲ್ಯಾಣಕ್ಕೆ ಬಂದು ಅಣ್ಣನ 'ಮಹಾಮಣಿಹ'ದಲ್ಲಿ ಭಾಗಿಯಾಗಿದ್ದರು, ಅಂಥವರಲ್ಲಿ ಪ್ರಮುಖರಾದವರೆಂದರೆ ಮಹಾದೇವ ಭೂಪಾಲ ಮತ್ತು ರಾಣಿ ಗಂಗಾದೇವಿಯವರು.
ಒಂದು ಸುದಿನದಲ್ಲಿ ರಾಜ-ರಾಣಿಯರಿಬ್ಬರೂ ಸ್ವಇಚ್ಛೆಯಿಂದ ತಮ್ಮ ಸಿರಿ ಸಂಪತ್ತನ್ನೆಲ್ಲ ಜಂಗಮರಿಗೆ ದಾನ ನೀಡಿ, ಯುವರಾಜ ಲಿಂಗರತಿಗೆ ರಾಜ್ಯವನ್ನು ಅರ್ಪಿಸಿ, ಕಲ್ಯಾಣದತ್ತ ಪ್ರಯಾಣ ಬೆಳೆಸುವ ಮನಸ್ಸು ಮಾಡುತ್ತಾರೆ.
ರಾಜ ವೈಭವವನ್ನು ರಾಜಧಾನಿಯಲ್ಲೇ ಬಿಟ್ಟು ಕಾಯಕ ಮಾಡಿ ಸರಳ ಜೀವನ ನಡೆಸಲು ನಿರ್ಧರಿಸಿದ್ದ ಮಹಾದೇವ ಭೂಪಾಲ ರಾಜನಿಗೆ- ಸುಕೋಮಲೆಯಾದ ತನ್ನ ಪತ್ನಿ ನಿರಂತರ ಈ ಕಷ್ಟಗಳನ್ನು ಸಹಿಸಲು ಸಾಧ್ಯವಿಲ್ಲವೆಂದೆನಿಸಿ, ಅವಳನ್ನು ಅಲ್ಲೇ ತಡೆದು
'ಅತಿಸಿರಿ ಸುಖಮಿರ್ಧ ಸ್ಥಿತಿ- ನಿನಗೆಲ್ಲಿಯ ಪಥ? ಇಲ್ಲೇ ನಿನ್ನ ಸುತರೊಳಿರು'
ಎನ್ನುತ್ತಾನೆ ಮಾರಯ್ಯ.
ಆದರೆ ಆಗಲೇ ಕಾವಿ ಸೀರೆ ಉಟ್ಟು ರುದ್ರಾಕ್ಷಿಯನ್ನು ಧರಿಸಿ ನಿಂತಿದ್ದ ರಾಣಿ ಗಂಗಾದೇವಿ ಗಂಡನನ್ನು ಕುರಿತು ಒಂದು ಮಾತನ್ನು ಹೇಳುತ್ತಾಳೆ.
'ಇದುವರೆವಿಗೂ ನಾವು ಅಮೃತದ ಸಾನಿಧ್ಯದಲ್ಲಿದ್ದರೂ ಅದನ್ನು ಕಾಣದೇ ಕೆಚ್ಚಲಿನ ಉಣ್ಣೆಯಂತೆ ಬದುಕಿದೆವು. ಇನ್ನಾದರೂ ಅರ್ಥಪೂರ್ಣವಾಗಿ ಸಾರ್ಥಕ ಬದುಕನ್ನು ಸಾಗಿಸೋಣ, ಉಣ್ಣೆಯಂತಾಗುವುದು ಬೇಡ' ಎಂದಿದ್ದರಲ್ಲಿ ನಾವು ಅವಳ ಮೇಲೆ ಪರಿಣಾಮ ಬೀರಿದ್ದ ಶರಣ ಚಿಂತನೆಯ ತೀವ್ರತೆಯನ್ನು ಗಮನಿಸಬೇಕು.
ಆಗಲೇ ರಚಿಸಿದ ಅವಳ ವಚನವೊಂದು ಭ್ರಮೆಯ ಸಂಸಾರದ ಕುರಿತು ಹೀಗೆ ಹೇಳುತ್ತದೆ..
ಸಂಸಾರ / ಸಂಗದಿಂದಲುದಯಿಸಿದ / ಸುಖವೆ ದುಃಖವೆಂದರಿಯದೆ / ಆ ಸುಖವನೆ ಮೆಚ್ಚಿ / ಭವದುಃಖವೆಂಬ ಕ್ರೂರ / ಜನ್ಮಚಕ್ರಕ್ಕೀಡಾಗಿ, ಅಲ್ಲಿ ತನ್ನ / ಮರೆದು, ತನಗಿಲ್ಲದುದ / ಭ್ರಮೆಯಿಂದ ತನ್ನದೆಂದು, ಬಾಳಿದರೇನು ಬಂತು? /
ಎಂಬಲ್ಲಿ- ಮನುಷ್ಯನು ಪರಶಿವನ ಅಂಗ. ಇದನ್ನು ಮರೆತು ತಾನು ಪ್ರತ್ಯೇಕ ವ್ಯಕ್ತಿಯೆಂದೂ ಐಹಿಕ ಸುಖವೇ ಜೀವನದ ಧ್ಯೇಯವೆಂದು ತಿಳಿದವ ಅನೇಕ ರೀತಿಯ ಕೆಟ್ಟ ಕೆಲಸವನ್ನು ಮಾಡುತ್ತಾನೆ, ಅದಕ್ಕೆ ತಕ್ಕ ಫಲವನ್ನು ಅವನು ಈ ಜನ್ಮದಲ್ಲಿಯೂ ತೀರಿಸದಿದ್ದರೆ, ಅದೇ ಮರೆವು ಮುಂದುವರೆದು, ಫಲಗಳನ್ನು ಭೋಗಿಸಲು ಮುಂದಿನ ಜನ್ಮವೆತ್ತುತ್ತಾನೆ.
ಹೀಗೆ ಜೀವನು ಹುಟ್ಟುವುದು ಕೆಟ್ಟ ಕರ್ಮ ಮಾಡುವುದು, ಸಾಯುವುದು, ಮತ್ತೆ ಹುಟ್ಟುವುದು ಹೀಗೆ ಒಂದು ಚಕ್ರದಂತೆ ಉರುಳುತ್ತಲೇ ಇರುತ್ತದೆ ಎಂದೆಲ್ಲ ಸಂಸಾರ ದಾರಿಯ ಕುರಿತು ಮಹಾದೇವಿ ವಿಶ್ಲೇಷಿಸುತ್ತಾರೆ.
ಮಹದೇವ ಭೂಪಾಲ ಮಾರಯ್ಯನಾಗಿ, ರಾಣಿ ಗಂಗಾದೇವಿ ಮಹಾದೇವಿಯಾಗಿ ಕಲ್ಯಾಣದತ್ತ ಸಾಗುತ್ತಾರೆ. ಆ ಸುದ್ದಿಯನ್ನು ತನ್ನ ಶರಣರ ಬಾಯಿಂದ ಕೇಳಿದ ಬಸವಣ್ಣನವರು ತಾವೇ ಸ್ವತಃ ತಮ್ಮ ಶಿವಶರಣ ಸಮೂಹದೊಂದಿಗೆ ಎದುರುಗೊಂಡು ಮಾರಯ್ಯ-ಮಹಾದೇವಿ ದಂಪತಿಯನ್ನು ಬರಮಾಡಿಕೊಳ್ಳುತ್ತಾರೆ.
ಇದರಿಂದಾಗಿ ಈ ದಂಪತಿಗಳಿಗೆ ಬಸವಣ್ಣನವರ ಮೇಲೆ ಮತ್ತಷ್ಟು ಭಕ್ತಿಭಾವ ಮೂಡಿ ನಿಲ್ಲುತ್ತದೆ. ಆಗ ಮಹಾದೇವಿ ಹೇಳಿದ ವಚನ ನೋಡಿ.
/ ಅಯ್ಯಾ ನಿಮ್ಮಾದ್ಯರ / ವಚನವ ಕೇಳಿ ಎನ್ನಂಗದ / ಭಂಗ ಹಿಂಗಿತ್ತು ನೋಡಾ / ಅಯ್ಯಾ ನಿಮ್ಮ ಶರಣರ / ಸಂಗದಿAದ ಮಹಾಲಿಂಗದ / ಸಂಯೋಗವಾಯಿತ್ತು ನೋಡಾ / ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ /
ಎನ್ನುವ ಭಕ್ತಿಭಾವವನ್ನು ಇವಳು ತೋರ್ಪಡಿಸುತ್ತಾಳೆ.
ಹಾಗೆಯೇ ಕಲ್ಯಾಣಕ್ಕೆ ಬಂದ ದಂಪತಿಗಳು ಊರ ಹೊರಗೆ ಒಂದು ಗುಡಿಸಲನ್ನು ಕಟ್ಟಿಕೊಂಡು ಕಾಡಿನಿಂದ ಸೌಧೆಯನ್ನು ತಂದು ಕಲ್ಯಾಣದ ಬೀದಿಗಳಲ್ಲಿ ಮಾರಿ ಹಣ ಸಂಪಾದಿಸಿ, ಮಹಾದೇವಿಯಮ್ಮ ತುಂಬ ರುಚಿಯಾದ ಅಂಬಲಿಯನ್ನು ಭಕ್ತಿಯಿಂದ ಸಿದ್ದಪಡಿಸುತ್ತಾಳೆ.
ದಂಪತಿಗಳಿಬ್ಬರೂ ಮೊದಲು ಜಂಗಮರಿಗೆ ಅದನ್ನು ಉಣಬಡಿಸಿ, ಅವರು ಸಂತೃಪ್ತರಾದ ನಂತರ ಉಳಿದದ್ದನ್ನು ತಾವು ಭಕ್ತಿಯಿಂದ ಸ್ವೀಕರಿಸುತ್ತಾರೆ.
ಅಂಥ ದಾಸೋಹದ ಬಗ್ಗೆ ಮಹಾದೇವಿಯವರ ಒಂದು ವಚನವೇ ಇದೆ.
/ ಪೂಜೆಯಲ್ಲಿ ಲಕ್ಷಿತವಪ್ಪವರು / ಪುಣ್ಯದ ಆಗಿಂಗೆ ಒಡಲು / ದಾಸೋಹವೆಂಬ ಸೋಹವನರಿದಲ್ಲಿ / ಚತುರ್ವಿಧಫಲಪದದಾಸೆಗೆ / ಒಡಲು, ಇಂತೀ ಉಭಯದ / ಪ್ರೀತಿಯನರಿತು ತೋರಿದ / ತೋರಿಕೆ ಬಂದಂತೆ ನೋಡ ನಿಕಃಳಂಕ ಮಲ್ಲಿಕಾರ್ಜುನಾ/
ಅಂದರೆ- ಲಿಂಗಾಂಗ ಸಾಮರಸ್ಯಕ್ಕೆ ಬಹಳ ಅವಶ್ಯವಾದ ಒಂದು ಅಂಶವೆಂದರೆ ನಿಸ್ವಾರ್ಥತೆ. ಇಲ್ಲಿ ಸತ್ಯ ಶುದ್ಧ ಕಾಯಕದಿಂದ ಸಂಪಾದಿಸಿದುದಷ್ಟನ್ನೇ ದಾಸೋಹಕ್ಕೆ ಉಪಯೋಗಿಸಬೇಕೇ ಹೊರತು ಉಳಿದ ಮಾರ್ಗಗಳಾದ ಹಿಂಸೆ ಕ್ರೌರ್ಯ ಮೋಸ ಮುಂತಾದವುಗಳಿಂದ ಸಂಪಾದಿಸಿದುದನ್ನಲ್ಲ.
ದಾಸೋಹವು ಭಕ್ತನ ನಿಷ್ಕಳಂಕ ಭಾವವನ್ನು ಪ್ರತಿಬಿಂಬಿಸಬೇಕೇ ಹೊರತು ಡಾಂಭಿಕತನ ವ್ಯವಹಾರ ಬುದ್ಧಿ ಅಹಂಕಾರವನ್ನಲ್ಲ. ದಾಸೋಹವು ಪ್ರಾಪಂಚಿಕ ವಸ್ತುಗಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡುತ್ತದೆಯಲ್ಲದೇ ಪರಶಿವನಿಂದ ಪಡೆದುದನ್ನು ಅವನಿಗೇ ದಾಸೋಹದ ರೂಪದಲ್ಲಿ ಹಿಂತಿರುಗಿಸಿದ ಒಂದು ರೀತಿಯ ಋಣಮುಕ್ತ ಭಾವವನ್ನು ಪ್ರಕಟಿಸುತ್ತದೆ ಎಂಬ ಭಾವಾರ್ಥವು ಇಲ್ಲಿ ವೇದ್ಯವಾಗಿದೆ.
ಮಹಾದೇವಿ ಮಾಡುವ ಅಂಬಲಿ ಅಮೃತದಷ್ಟೇ ರುಚಿಯಾಗಿರುತ್ತದೆ ಎಂಬ ವಿಷಯ ತಿಳಿದ ಬಸವಣ್ಣನವರು ಒಮ್ಮೆ ಮಾರಯ್ಯನ ಗುಡಿಸಲಿಗೇ ಬಂದುಬಿಡುತ್ತಾರೆ.
ಮಾಹಾರಾಣಿಯಾಗಿದ್ದ ಮಹಾದೇವಿ ಒಮ್ಮೆಯಾದರೂ ಪಾಕಶಾಲೆಗೆ ಹೋಗಿದ್ದಳೋ ಇಲ್ಲವೋ, ಆದರೆ ಅವಳು ಅಂದು ಭಕ್ತಿಯಿಂದ ತಯಾರಿಸುವ ಆಹಾರ ಅಷ್ಟು ರುಚಿಕಟ್ಟಾಗಿತ್ತು, ಅದನ್ನು ಅರುಹಿದ ಬಸವಣ್ಣನಿಗೆ ಮಾಹಾದೇವಿ
'ಹಾಗೇನಿಲ್ಲ, ಶಿವಪ್ರಸಾದವೆಂದು ಸ್ವೀಕರಿಸಿದ ನಿಮ್ಮಂಥ ಜಂಗಮರ ಮನವೇ ಬಹಳಷ್ಟು ರುಚಿ' ಎಂದು ವಚನ ಕಟ್ಟಿ ಹಾಡುತ್ತಾಳೆ.
ಯಾರ ದರ್ಶನಕ್ಕಾಗಿ ಸಾಮಿಪ್ಯಕ್ಕಾಗಿ ದೂರದ ಕಾಶಿಯಿಂದ ಈ ದಂಪತಿಗಳು ಕಲ್ಯಾಣಕ್ಕೆ ಆಗಮಿಸಿದ್ದರೋ ಅಂಥ ಬಸವಣ್ಣನವರೇ ತಮ್ಮ ಗುಡಿಸಲಿಗೆ ಆಗಮಿಸಿದ್ದನ್ನು ಕಂಡು ಮೋಳಿಗೆ ಮಹಾದೇವಿಗೆ ಅತ್ಯಂತ ಸಂತೋಷವಾಗುತ್ತದೆ. ಅಲ್ಲಿ ಬಸವಣ್ಣ ನಡೆಸಿದ ಲಿಂಗಪೂಜೆಯನ್ನು ನೋಡಿ ಹರ್ಷದಿಂದ ನುಡಿದ ಮಹಾದೇವಿಯ ಇನ್ನೊಂದು ವಚನ ಇಂತಿದೆ..
/ಹೃತ್ಕಮಲ ಮಧ್ಯದಲ್ಲಿಪ್ಪ / ಲಿಂಗದ ಸರ್ವಾಂಗದಲ್ಲಿ / ವೇಧಿಸಿ, ಪರಿಪೂರ್ಣವಪ್ಪ/ ಲಿಂಗವ ಅಂತರ್ಮುಖದಿAದ / ಬಹಿರ್ಮುಖಕ್ಕೆ ತಂದು / ಪಂಚಸ್ಥಾನದಲ್ಲಿಪ್ಪ ಲಿಂಗವ / ಕರಸ್ಥಲದಲ್ಲಿ / ಮೂರ್ತಿಗೊಳಿಸಲಿಕ್ಕಾಗಿ /
ಎಂಬಲ್ಲಿ- ಜೀವಾತ್ಮನ ವಾಸಸ್ಥಾನವಾದ ಹೃದಯಕಮಲದ ಮಧ್ಯದಲ್ಲಿದ್ದ ಲಿಂಗವನ್ನು ಸರ್ವಾಂಗದಲ್ಲಿ ಬೆರೆಸಿ, ಹಾಗೆ ಪರಿಪೂರ್ಣವಾದಂತಹ ಲಿಂಗವ ಅಂತರ್ಮುಖದಿAದ ಬಹಿರ್ಮುಖಕ್ಕೆ ತಂದು, ಪಂಚಸ್ಥಾನದಲ್ಲಿದ್ದ ಲಿಂಗವನು ಅಂಗೈಯಲ್ಲಿ ಪ್ರತಿಷ್ಟಾಪಿಸಿಕೊಂಡು ನಾವು ಶುದ್ಧರಾಗಬೇಕು ಎಂಬ ಮಾತನ್ನು ಹೇಳುತ್ತಾರೆ ಮಹಾದೇವಿ.
ಇಲ್ಲಿ ಲಿಂಗ ಎಂಬ ಪದಕ್ಕೆ ಇಷ್ಟಲಿಂಗ, ಪರಶಿವ ಎಂಬಂತಹ ಹಲವಾರು ಅರ್ಥಗಳಿವೆ. ಇಷ್ಟಲಿಂಗವೆಂದರೆ ಕೇವಲ ಪೂಜಿಸಲ್ಪಡುವ ವಸ್ತುವಷ್ಟೇ ಅಲ್ಲ, ಸಾಧಕನ ವಿಚಾರಶಕ್ತಿ ವಿಕಾಸವಾದಂತೆಲ್ಲ ಅವನು ಇಷ್ಟಲಿಂಗವನ್ನು ಒಂದು ಧ್ಯಾನವಸ್ತುವನ್ನಾಗಿ ಮಾಡಿಕೊಳ್ಳುತ್ತಾನೆ.
ಲಿಂಗದಲ್ಲಿ ಪರಶಿವನನ್ನು ಕಾಣುವುದೇ ನಿಜವಾದ ಇಷ್ಟಲಿಂಗ ಪೂಜೆ ಎಂದಿದ್ದಾರೆ ಶರಣರು ಕೂಡ. ಪೂಜಾವಿಧಿಗಳು ಮುಗಿದ ನಂತರ ಸಾಧಕನು ಇಷ್ಟಲಿಂಗವನ್ನೇ ದಿಟ್ಟಿಸಿ ನೋಡುತ್ತಾ ಧ್ಯಾನಮಗ್ನನಾಗಿ ಬಾಹ್ಯ ಪ್ರಪಂಚವನ್ನೂ ಮರೆತು, ತನು ಪರಶಿವನಲ್ಲಿ ಒಂದಾಗುವುದನ್ನು ಅನುಭವಿಸಿ ಕೊನೆಯಲ್ಲಿ ತನ್ನನ್ನೂ ತಾನು ಮರೆಯಬೇಕು ಎಂಬುದು ಈ ಮಾತಿನ ತಾತ್ಪರ್ಯ.
ಈ ಸಿದ್ದಿ ಸ್ಥಾವರ ಲಿಂಗದಿಂದ ಸಾಧುವಾಗುವುದಿಲ್ಲ. ಅಂದರೆ ಪರಿಪೂರ್ಣ ವ್ಯಕ್ತಿತ್ವದವರಾಗಬೇಕು ಎಂಬ ಸಾಂಕೇತಿಕ ಅರ್ಥವನ್ನು ಮೋಳಿಗೆ ಮಹಾದೇವಿ ಇಲ್ಲಿ ಹಿಡಿದಿಡುತ್ತಾರೆ. ಇಲ್ಲಿ ನಮಗೆ ಕಾಣುವುದು ಆಧ್ಯಾತ್ಮಿಕ ಬಾಳಿಗೆ ಬೆಳಕಾಗಬಲ್ಲ ಜೀವನ ದರ್ಶನ.
ಲಿಂಗಪೂಜೆಯ ಧ್ಯಾನದ ಕುರಿತು ಇನ್ನೂ ಹಲವಾರು ವಚನಗಳು ನಮಗೆ ದೊರಕುತ್ತವೆ, ಅವುಗಳಲ್ಲಿ ಒಂದು ಹೀಗಿದೆ..
/ ಬೀಜದೊಳಗಣ ವೃಕ್ಷದ ಹಣ್ಣು / ಅದನಾರು ಮೆಲಬಹುದು? / ಸಸಿಯೊಳಗಣ ಲತೆಪರ್ಣ / ತಲೆದೋರದ ನಸುಗಂಪಿನ / ಕುಸುಮವ ಅದಾರು / ಮುಡಿವರು ? ಇಂತೀ ಅರಿವಿನ / ಅರಿವ ಕುರುಹಿಟ್ಟು / ಕೂಡುವನೆ ಲಿಂಗಾಂಗಿ ?/
ಎಂಬ ಮಾಹಾದೇವಿಯವರ ಪ್ರಶ್ನೆಗಳಲ್ಲಿ- ಒಂದು ಬೀಜದೊಳಗೆ ವೃಕ್ಷ ಮೈತಳೆಯುತ್ತದೆ. ವೃಕ್ಷವು ಹಣ್ಣು ಕೊಡುತ್ತದೆ, ನಂತರ ಆ ಹಣ್ಣು ಯಾರ ಪಾಲಾಗುತ್ತದೆ ಗೊತ್ತಿಲ್ಲ. ಒಂದು ಸಸಿಯೊಳಗೆ ಎಲೆ ಬಳ್ಳಿಗಳಿರುತ್ತವೆ, ಅದು ಹೂ ಬಿಟ್ಟು ನಂತರ ಆ ಹೂ ಯಾರ ಪಾಲಾಗುತ್ತದೆ ಬಲ್ಲವರಾರು ?
ಈ ತರಹದ ಅರಿವನ್ನು ಗುರುತಿಟ್ಟುಕೊಂಡು ಲಿಂಗಾಂಗಿಯನ್ನು ಕೂಡಲು ಸಾಧ್ಯವೇ? ಲಿಂಗಾಂಗಿ ಅಂದರೆ ವಿಶಾಲಾರ್ಥದಲ್ಲಿ ಲಿಂಗವನ್ನೇ ದೇಹವನ್ನಾಗಿ ಮಾಡಿಕೊಂಡ ಅಂಗ ಅಂದರೆ ಲಿಂಗದೇಹಿ. ಹೀಗೆ ಇಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದದ್ದನ್ನು ನಾವು ಗಮನಿಸಬಹುದು.
ತತ್ವದರ್ಶನ ನೀಡುವ ಮತ್ತೊಂದು ವಚನದಲ್ಲಿ-
ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ / ದಿಟದ ಬೀಜದ ವೃಕ್ಷದಂತೆ? /
ಮಹಾದೇವಿಯವರ ಮಹತ್ವದ ಈ ಒಂದು ವಚನದಲ್ಲಿ ಅವರು ಕಲ್ಲನ್ನು ಭೂಮಿಯಲ್ಲಿ ಬಿತ್ತಿ ಎಷ್ಟು ನೀರು ಎರೆದರೂ ನಿಜವಾದ ಒಂದು ವೃಕ್ಷದಂತೆ ಚಿಗುರಿ ನಿಲ್ಲಲು ಸಾಧ್ಯವೇ? ಅಂತ ಕೇಳುತ್ತಾರೆ.
ಇನ್ನೂ ಮುಂದುವರೆದು, ಶಿವಲಿಂಗ ಪೂಜೆಯಲ್ಲಿ ಶ್ರದ್ಧೆ ಸನ್ಮಾರ್ಗಗಳು ಇಲ್ಲದ ಭಕ್ತಿಯೂ ಹಾಗೆಯೇ, ಯಾವ ಪ್ರಯೋಜನಕ್ಕೂ ಬಾರದು ಮತ್ತು ಅದು ವ್ಯರ್ಥ ಎಂಬ ತಾತ್ಪರ್ಯದಲ್ಲಿ ಈ ವಚನವು ಜೀವಂತವಾಗಿದೆ.
ದೇಹವನ್ನು ದಂಡಿಸಿ ದುಡಿದು ಬಂದ ಹಣದಲ್ಲಿ ಕೆಲವು ಜನರಿಗಾದರೂ ದಾಸೋಹ ನಡೆಸಿ ಉಳಿದದ್ದನ್ನು ತಾವು ಸ್ವೀಕರಿಸುವ ಶರಣರ ವೃತದಂತೆ ಮೋಳಿಗೆ ಮಹಾದೇವಿ ದಂಪತಿಗಳಿಬ್ಬರೂ 'ಕಾಯಕ ದಾಸೋಹ' ಕೈಗೊಂಡು ನೆಮ್ಮದಿ ಸಂತೃಪ್ತಿಯಿಂದ ಜೀವಿಸುತ್ತಾರೆ.
ಏಕದೇವೋಪಾಸಕರಾದ ಶಿವಶರಣರಿಂದ ಪ್ರಭಾವಿತಳಾಗಿ, ಪರಶಿವನ ಪರಮ ಭಕ್ತೆಯಾದಂತಹ ಮಹಾದೇವಿ, ಪರಶಿವ ಒಬ್ಬನೇ ದೇವರು ಎಂಬಂತಹ ತಮ್ಮದೊಂದು ವಚನದಲ್ಲಿ,
/ಆರು ದೇವರ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ / ಮೂರು ದೇವರ ನಿಮ್ಮ ಮೂಗಿನಲ್ಲಿ ಮುರಿದುಕೊಳ್ಳಿ / ಗುರು ತೋರಿದ್ದು ಒಂದೇ ದೇವರು ಸಾಕು /
ಎಂದು ಹೇಳಿದ್ದನ್ನು ನಾವು ಗಮನಿಸಬಹುದು. ಆ ನಂತರದಲ್ಲಿ ಪ್ರತಿನಿತ್ಯವೂ ಕಾಯಕದಿಂದ ಬಂದ ಪ್ರತಿಫಲದಿಂದಲೇ ಅತ್ಯಂತ ಭಕ್ತಿಯಿಂದ ಜಂಗಮರ ಆರಾಧನೆ ನಡೆಸುವುದು ಮೋಳಿಗೆ ಮಹಾದೇವಿಯ ಒಂದು ವ್ರತವೇ ಆಗಿ ಹೋಗುತ್ತದೆ.
ತನ್ನ ಜೀವನದ ಸಾರ್ಥಕತೆಯಿರುವುದೇ ಅದಕ್ಕೆ ಚ್ಯುತಿ ಬರದಂತೆ ನಡೆಸಿಕೊಂಡು ಹೋಗುವುದರಲ್ಲಿ ಎಂದು ಬಲವಾಗಿ ನಂಬಿದ ಅವಳ ಇನ್ನೊಂದು ವಚನದಲ್ಲಿ
/ಇಂದಿಗೆಂದು ನಾಳೆಗೆಂದು ಚಿಂತಿಸಲೇಕೆ ?/ ತಂದಿಕ್ಕುವ ಶಿವಂಗೆ ಬಡತನವೇ?/
ಎಂದು ಕೇಳುತ್ತಾಳೆ. ಮೋಳಿಗೆ ಮಹಾದೇವಿಯವರ ವಚನಗಳ ವಿಶೇಷವೆಂದರೆ, ಇವರು ಹಲವು ಛಿದ್ರ ಚಿತ್ರಗಳನ್ನು ಕೊಡುತ್ತಾರೆ, ಅದರ ಒಟ್ಟಾರೆ ಅರ್ಥಗಳು ಒಂದು ಇಡಿಯಾದ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ನಿಲುವನ್ನು ಸ್ಪಷ್ಟಪಡಿಸುತ್ತವೆ.
ಅಂತರಂಗ ಬಹಿರಂಗದ ವಿಚಾರವುಳ್ಳ ಇನ್ನೊಂದು ವಚನವನ್ನು ಉಲ್ಲೇಖಿಸಬೇಕೆಂದರೆ,
/ ಕಪಟಕ್ಕೆ ಒಳಗು ಹೊರಗಲ್ಲದೆ ಸ್ವಯಂಭು / ಹೇಮಕ್ಕುಂಟೇ ಒಳಗು ಹೊರಗು? /
ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಇಲ್ಲಿ ಪ್ರತಿಯೊಂದು ವಸ್ತುವಿನ ಅಸ್ತಿತ್ವಕ್ಕೂ ಪರಶಿವನೇ ಕಾರಣ, ಆದರೆ ಪರಶಿವನ ಅಸ್ತಿತ್ವಕ್ಕೆ ಅವನೇ. ಹಾಗಾಗಿ ಅವನಿಗೆ ಹೊರಗೊಂದು ಒಳಗೊಂದು ಇಲ್ಲ, ಆತ ಹೇಮದಂತೆ, ಒಳಹೊರಗೆಲ್ಲವೂ ಇರುವುದು ಒಂದೇ ಹೊಳಪು.
ಆದರೆ ಕಪಟ ಮನುಷ್ಯನೊಳಗೆ ಒಳಗು ಹೊರಗು ಬೇರೆಯಾಗಿರುವಂಥದ್ದು. ಕುಟಿಲ ಬುದ್ದಿಯಿಟ್ಟುಕೊಂಡು ನೀವು ತೋರಿಕೆಗಾಗಿ ಪೂಜೆ ಪುನಸ್ಕಾರವ ಮಾಡಿದರೆ, ಪರಶಿವಂಗೆ ಅದು ಮೆಚ್ಚಿನ ಪೂಜೆಯಾಗದು. ನನ್ನ ನಿಃಕಳಂಕ ಮಲ್ಲಿಕಾರ್ಜುನನೂ ಅದನ್ನು ತೃಣವಾಗಿ ಕಾಣುತ್ತಾನೆ ಅನ್ನುತ್ತಾಳೆ ಮಹಾದೇವಿ. ಇಲ್ಲಿ ಇಹದ ಬದುಕಿಗೆ ಆದ್ಯತೆ ನೀಡುವ ಅನುಭಾವದ ದೃಷ್ಟಿಕೋನವಿದೆ.
ಅದೇ ಅನುಭಾವ ಮುಂದುವರೆದು ಇನ್ನೊಂದು ವಚನದಲ್ಲಿ
/ನೀರು ನೆಲ ನಿಲ್ಲದೇ ಇರಬಹುದೇ? / ಬೀಜ ನೆಲೆಯಿಲ್ಲದೇ ಹುಟ್ಟಬಹುದೇ? / ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೇ ? /
ನೀರು ನಿಲ್ಲಲು ನೆಲ ಬೇಕು, ಹಾಗೆಯೇ ಬೀಜ ಹುಟ್ಟಲೂ ನೆಲ ಬೇಕು, ಜ್ಞಾನ ಅರಿಯಲು ಕ್ರಿಯೆಯೇ ಮುಖ್ಯ. ಹಾಗೆಯೇ ನಮ್ಮ ಬುದ್ದಿಯಲ್ಲಿ ತನ್ಮಯತೆಯಿಲ್ಲದೇ ಪರಶಿವನನ್ನು ಗ್ರಹಿಸಲು ಅಸಾದ್ಯ ಎಂಬ ಮಾತನ್ನು ಮಹಾದೇವಿ ಮತ್ತೆ ಮತ್ತೆ ಹೇಳುತ್ತಾಳೆ.
ಮಹಾದೇವಿಯವರು ತಮ್ಮ ಬಹುತೇಕ ರಚನೆಗಳಲ್ಲಿ ಹೆಣೆಯುವ ಪ್ರತಿಮಾ ರೂಪಕಗಳು ಅವರ ವಚನಗಳನ್ನು ಹೆಚ್ಚು ಧ್ವನಿಪೂರ್ಣವನ್ನಾಗಿಸಿವೆ. ಅವುಗಳಿಗೆ ಬಹಳಷ್ಟು ಉದಾಹರಣೆಗಳನ್ನು ನಾವು ಕೊಡುತ್ತಾ ಹೋಗಬಹುದು.
/ಸುಗಂಧದ ಮೂಲದ ಬೇರಿನ / ಗಂಧ ಎಲೆ ಬಳ್ಳಿಯನೇತಕ್ಕೆ / ವೇಧಿಸದು ? /
ಎಂಬಂತಹ ಒಂದು ವಚನದಲ್ಲಿ ಮರದ ಮೂಲ ಬೇರಿನಲ್ಲಿರುವ ಗಂಧ, ಪರಿಮಳವು ಮೇಲೆ ಎಲೆ ಬಳ್ಳಿಗೆ ಅಂಟಿರುವುದಿಲ್ಲ, ಹೂವಿನ ಸುವಾಸನೆ ತನ್ನ ತೊಟ್ಟು ಎಲೆ ಚಿಗುರು ಬೇರಿಗೆ ಅಂಟಿರುವುದಿಲ್ಲ. ಇದು ಆತನೇ ಅಂದರೆ ಇಷ್ಟಲಿಂಗನೇ ಮಾಡಿದ್ದು, ಇವೆಲ್ಲವೂ ಸದ್ವಿವೇಕದ ಕುರುಹು ಅನ್ನುತ್ತಾಳೆ ಮಹಾದೇವಿ. ಸಮಾನತೆ ಮತ್ತು ಸಮಷ್ಟಿ ಪ್ರಜ್ಞೆಗೆ ಅವಳು ಇಲ್ಲಿ ಆದ್ಯತೆ ನೀಡುತ್ತಾಳೆ.
ಇನ್ನೂ ಮುಂದುವರೆಯುವ ಅರ್ಥವನ್ನು ನಾವು ಶೋಧಿಸುವುದಾದರೆ, ಇಲ್ಲಿ ಒಂದು ಪ್ರಗತಿಪರವಾದ ಸಮಾಜ ರಚನೆಯ ಹಂಬಲವಿದ್ದದ್ದನ್ನು ನಾವು ಗ್ರಹಿಸಬಹುದು, ಹೀಗೆ ಸಮಾಜದಿಂದ ಪಡೆದುದನ್ನು ಸಮಾಜಕ್ಕೇ ಕೊಡುವ ದಾಸೋಹ ತತ್ವವನ್ನು ಉಳಿದೆಲ್ಲ ಶರಣರಂತೆ ಮಹಾದೇವಿಯೂ ಎತ್ತಿ ಹಿಡಿದಳು.
ಇದೇ ತರಹದ ಇನ್ನೊಂದು ವಚನದಲ್ಲಿ-
/ಸ್ಥಾಣು ನರನೆಂದು, ರಜ್ಜು / ಸರ್ಪನೆಂದು, ಸ್ಪಟಿಕದ / ಘಟದಲ್ಲಿ ನಿಂದ ಗಜ/ ದಿಟವೆಂದು ನಿಬದ್ಧಿಸಿ / ನೋಡಲಿಕ್ಕಾಗಿ /
ಮರದ ಕೊರಡು ಮನುಷ್ಯನೆಂದು, ಹಗ್ಗವನ್ನು ಸರ್ಪವೆಂದು, ಕೊಡದ ಪ್ರತಿಬಿಂಬದಲ್ಲಿ ಕಂಡಂತಹ ಆನೆಯನ್ನು ಸತ್ಯವೆಂದು ಒಂದಾಗಿಸಿ ನೋಡಲಿಕ್ಕೆ, ಇಂಥ ಸಂದೇಹಗಳು ಇದ್ದಲ್ಲಿ ನಿಜಗುಣ ಹೇಗೆ ನಿಂತಾನು? ಇಂಥ ಸಂದೇಹಗಳನ್ನು ತೆಗೆದು ಹಾಕಿದರೆ ನೀವು ಪರಶಿವನಿಗೆ ಇಷ್ಟವಾಗುತ್ತೀರಿ ಎಂಬುದು ಇಲ್ಲಿಯ ತಾತ್ಪರ್ಯ.
ಇಲ್ಲಿ ಏಕಭಾವದ ಭಕ್ತಿ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತಾದ ಚಿಂತನೆಯುಳ್ಳ ಮಾನವ್ಯ ಧೋರಣೆಯನ್ನು ನಾವು ಗಮನಿಸಬಹುದು.
ಉಳಿಸಿ ಕೂಡಿಟ್ಟು ಆಸ್ತಿ ಮಾಡುವುದು ನಿಸ್ಪçಯೋಜಕವಾದುದು ಎಂಬ ಆಶಯದಿಂದಲೇ ಹಿಂದಿನ ರಾಜ ವೈಭೋಗವನ್ನು ಮರೆತು ಶರಣರ ತತ್ವಕ್ಕೆ ಅನುಸಾರವಾಗಿ ಬಾಳುತ್ತಿದ್ದರು ಈ ಮಹಾದೇವಿ ದಂಪತಿಗಳು ಎಂಬುದು ಅವರ ಹಲವು ವಚನಗಳಲ್ಲಿ ಒಡಮೂಡಿದೆ.
ಸ್ತ್ರೀ ಸಮಾನತೆಯ ಕುರಿತಾದ ಅರಿವಿಗೂ ದನಿಯೆತ್ತಿದ ಅನೇಕ ವಚನಗಳನ್ನೂ ನಾವಿಲ್ಲಿ ಕಾಣಬಹುದು. / ಚಿತ್ರದ ಬೊಂಬೆಯ ಹಾಹೆ / ಎಲ್ಲಕ್ಕೂ ಆತ್ಮನಿಂದ ಚೇತರಿಸಿ / ನಡೆಯುತ್ತಿಹವೆ ? / ಅವು ಸೂತ್ರಾದಿಕನ ಭೇದ, ಎನ್ನ / ಶಕ್ತಿ ಜಾತಿಯ ಲಕ್ಷಣ, ನಿಮ್ಮ / ಭಕ್ತಿಸೂತ್ರದಿಂದ ಎನ್ನ/ ಸ್ತಿçÃಜಾತಿ ನಿಮ್ಮ ಶ್ರೀಪಾದದಲ್ಲಿ / ಅಡಗಿತ್ತು / ಎಂಬಲ್ಲಿ ಸ್ತಿçà ಸಂವೇದನೆಯ ಹಲವು ಮಗ್ಗುಲುಗಳು ಕಾಣುತ್ತವೆ. ಇಂಥ ವಚನವು ತತ್ವಜ್ಞಾನವನ್ನು ಬೋಧಿಸುತ್ತಲೇ ಆಂತರ್ಯದಲ್ಲಿ ಸಾಮಾಜಿಕ ತರತಮ ಧೋರಣೆಗಳನ್ನೂ ತಿದ್ದುತ್ತಿರುತ್ತವೆ.
ಹೀಗೆ ಇವರ ವಚನಗಳು ಸಾಕಷ್ಟು ವೈವಿಧ್ಯಮಯವಾಗಿದ್ದು ನಮ್ಮ ದೈನಂದಿನ ಬದುಕಿಗೆ ಬೇಕಾದ ಸಮಗ್ರ ವಿಚಾರಧಾರೆಗಳು ಇಲ್ಲಿವೆ. ದುಡಿಮೆಯ ಮಹತ್ವವನ್ನು ಹಾಗೂ ಶ್ರಮ ಸಂಸ್ಕೃತಿಯ ಪ್ರತಿಪಾದನೆಯನ್ನು ದಾಖಲು ಮಾಡುತ್ತಲೇ ಮೋಳಿಗೆ ಮಹಾದೇವಿಯವರ ವಚನಗಳು ಸಾರ್ವಕಾಲಿಕ ಮಾನವ ಧರ್ಮದ ಚಿಂತನೆ ಮತ್ತು ಜೀವಪರ ನಿಲುವುಗಳನ್ನು ತನ್ನೊಡಲಲ್ಲಿರಿಸಿಕೊಂಡು ಹುಟ್ಟಿದ್ದು ಎದ್ದು ಕಾಣುತ್ತದೆ.
ಇನ್ನೂ ಹಲವಾರು ವಚನಗಳಲ್ಲಿ ಆತ್ಮ ವಿಮರ್ಶೆಯಷ್ಟೇ ವಿಫುಲವಾಗಿ ಸಮಾಜ ವಿಮರ್ಶೆಯನ್ನೂ ನಾವು ಕಾಣಬಹುದು. ಮೋಳಿಗೆ ಮಹಾದೇವಿಯರಂಥ ಅನುಭಾವಿಗಳು ಮಾತ್ರ ತಮ್ಮ ಚಿಂತನೆಯನ್ನು ಹೃದಯದಿಂದ ಸಹೃದಯಕ್ಕೆ ಮುಟ್ಟುವಂತೆ ಹೀಗೆ ಬಿಡಿ ಮಾತುಗಳ ಮೂಲಕ ಹೇಳಬಲ್ಲರು, ಇವರ ವಚನಗಳು ಅಕ್ಕನ ವಚನಗಳಿಗೆ ತೀರ ಹತ್ತಿರದ ತತ್ವಜ್ಞಾನವನ್ನು ಒಡಮೂಡಿಸಿಕೊಂಡು ಬೆಳೆಯುತ್ತಲೇ ತನ್ನದೇ ಆದ ಛಾಪನ್ನು ಕೂಡ ಉಳಿಸಿಕೊಂಡಿವೆ ಎಂಬುದು ಗಮನಾರ್ಹವಾಗಿದೆ.
ಇಂದಿನವರೆಗೆ ಇವರ ಕೇವಲ ಎಪ್ಪತ್ತು ವಚನಗಳು ಮಾತ್ರ ನಮ್ಮ ಸಂಶೋಧಕರಿಗೆ ಸಿಕ್ಕಿವೆ, ಅವು 'ವಚನ ಸಂಚಯ' ಸಂಪುಟಗಳಲ್ಲಿ ನಮ್ಮ ಓದಿಗೆ ದಕ್ಕುತ್ತವೆ. ಇನ್ನೂ ಹಲವಾರು ವಚನಗಳನ್ನೂ ಸಹ ಇವರು ರಚಿಸಿರಬಹುದು ಎಂಬ ಮಾತೂ ಕೂಡ ಇತಿಹಾಸಕಾರರು ಹೇಳಿದ್ದಾರೆ. 'ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು' ಎಂಬ ಮಾತನ್ನು ಸಾಕ್ಷಾತ್ಕರಿಸುವಂತಿದೆ ಮಹಾದೇವಿಯವರ ವಚನಗಳ ಜಗತ್ತು.
ಮೋಳಿಗೆ ಮಹಾದೇವಿಯವರು ಒಂದೆಡೆ ಅಕ್ಕಮಹಾದೇವಿಯವರ ವಚನಗಳಿಂದ ಪ್ರಭಾವಿತರಾದದ್ದನ್ನೂ ನಾವಿಲ್ಲಿ ಗಮನಿಸಬೇಕು ಮತ್ತು ಅವರು ತಮ್ಮ ಅಂಕಿತನಾಮವನ್ನು ಕೂಡ 'ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ' ಎಂದು ಬಳಸುತ್ತಿದ್ದುದು ಕೂಡ ಇದಕ್ಕೆ ಪುಷ್ಟಿಯನ್ನು ಒದಗಿಸುತ್ತದೆ.
--------------------