Dvaita Darshana ದ್ವೈತ ದರ್ಶನ

Dvaita Darshana ದ್ವೈತ ದರ್ಶನ Visit Dvaita Darshana ದ್ವೈತ ದರ್ಶನ site and join the site . http://dwaitadarshana.blogspot.in/

16/10/2025
27/07/2023
19/07/2023

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸತ್ಪರಂಪರೆಯನ್ನು ಬೆಳಗಿದ, ಅನೇಕ ವಿಸ್ಮಯಗಳನ್ನು ಕಾಪಾಡಿಕೊಂಡು ಬಂದ ಪರಮಪಾವನ ಪೀಠ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠ

ಸಹೃದಯ ಅಧ್ಯಾತ್ಮ ಬಂಧುಗಳೇ,

ಇಂದಿನ ಸಜ್ಜನ ವೃಂದಕ್ಕೆ ಸಂತೋಷ ತರುವ ಒಂದು ಸತ್ಯ ಸಂಗತಿಯನ್ನು ತಿಳಿಸುತ್ತಿದ್ದೇನೆ. ಇಂದು ಅನೇಕ ಜಾಲತಾಣಗಳಲ್ಲಿ ಒಬ್ಬರ ಮಹಿಮೆಯನ್ನು ಅತಿಶಯವಾಗಿ ಕಾಣಲು ಮತ್ತೊಬ್ಬರನ್ನು ನಗಣ್ಯವಾಗಿ ಕಾಣುವುದು. ಅವರಲ್ಲಿ ಇಲ್ಲಸಲ್ಲದ ದೋಷಗಳನ್ನು ಹುಡುಕುವುದು ಅತ್ಯಂತ ಪೇಲವವೆನಿಸಿದೆ. ಇದೆಲ್ಲವೂ ವಿಕೃತ ಮನಸ್ಸಿನ ಪರಿಣಾಮವೆಂದೇ ಭಾವಿಸಬೇಕು. ಸಜ್ಜನರಾದವರು ಗುಣಗಳಲ್ಲಿ ಎಂದೂ ಮಾತ್ಸರ್ಯವನ್ನು ಹೊಂದುವುದಿಲ್ಲ ಹೊರತಾಗಿ ಗುಣಾಂಶಗಳಲ್ಲಿ ಸಂತೋಷವನ್ನು ಹೊಂದುತ್ತಾರೆ. ಈ ಅಭಿಪ್ರಾಯದಿಂದ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ಅದ್ಭುತ ಘಟನೆಯನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.

ಮೈಸೂರಿನ ಕೃಷ್ಣಮೂರ್ತಿ ಪುರಂ ರಾಘವೇಂದ್ರ ಮಠಕ್ಕೆ ಒಂದು ಬಾರಿ ಮಂತ್ರಾಲಯ ಮಠದ ಪೀಠಾಧಿಪತಿಳಾದ ಪರಮಪೂಜ್ಯ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಆಗಮಿಸಿದ್ದರು.
ಆ ಪ್ರಸಂಗದಲ್ಲಿ ಆ ಮಠದ ನಿರ್ವಾಹಕರಾದ ವಿದ್ವಾನ್ ಶ್ರೀನಾಥ್ ಆಚಾರ್ಯರು ಶ್ರೀಪಾದರಲ್ಲಿ ತಮ್ಮ ಗೋಶಾಲೆಗೆ ಆಗಮಿಸುವಂತೆ ವಿಜ್ಞಾಪಿಸಿದರು. ಗೋಶಾಲೆಗೆ ಹೋದ ಶ್ರೀಪಾದರಲ್ಲಿ ಒಂದು ಹಸುವು ತೆನೆಯಾಗುತ್ತಿಲ್ಲ. ಬರಡು ಬಂಜೆ ಎಂದು ಎಲ್ಲ ವೈದ್ಯರು ಹೇಳುತ್ತಿದ್ದಾರೆ. ನೀವೇ ಅನುಗ್ರಹಿಸಬೇಕು. ಎಂದು ಪ್ರಾರ್ಥಿಸಿದರು.
ನಮಿಸುವವರಿಗೆ ಕಾಮಧೇನು ಎನಿಸಿದ ರಾಘವೇಂದ್ರ ಗುರುಸಾರ್ವಭೌಮರು ಶ್ರೀ ಶ್ರೀ ಸುಬುಧೇಂದ್ರ ತೀರ್ಥರಲ್ಲಿ ನಿಂತು ಒಂದು ಪ್ರೇರಣೆಯನ್ನು ಮಾಡಿ ಪವಾಡವನ್ನೇ ಮಾಡಿದರು.
ಪರಮಪೂಜ್ಯರು ಗರ್ಭ ಧರಿಸದ ಹಸುವಿನ ಬೆನ್ನಿನ ಮೇಲೆ ಹತ್ತಾರು ಬಾರಿ ಕೈಯಾಡಿಸಿ ನೇವರಿಸಿ ಅನುಗ್ರಹಿಸಿದರು. ತೆನೆಯಾಗುತ್ತದೆ ಎಂದು ಹೇಳಿ. ಹೊರಟರು.

ಅಂದು ಬರಡು ಎಂದು ಅನಿಸಿಕೊಂಡ ಹಸು ಇಂದು ಅನೇಕ ಕರುಗಳಿಗೆ ತಾಯಿಯಾಗಿದೆ. ರಾಯರ ಅಭಿಷೇಕಕ್ಕೆ ಹಾಲನ್ನು ಸುರಿಸುವ ಸಾಧಕಿ ಯಾಗಿದೆ.
ಹೀಗಾಗಿ ಸತ್ ಪರಂಪರೆಯಲ್ಲಿ ಬಂದ ಎಲ್ಲ ಪೀಠಾಧಿಪತಿಗಳನ್ನು ಗೌರವದಿಂದ ಕಾಣೋಣ.

ಪರಶುಕ್ಲ ತ್ರಯರನ್ನು ಬಿಟ್ಟು ಎಲ್ಲರಲ್ಲಿಯೂ ದೋಷಗಳು ಸಹಜ . ಗುಣಗಳಲ್ಲಿ ಮತ್ಸರವನ್ನು ಹೊಂದುವವನು ಸಜ್ಜನ ಆಗಲಾರ. ಇದನ್ನು ಅರ್ಥೈಸಿಕೊಂಡು ಸಣ್ಣಪುಟ್ಟ ದೋಷಗಳನ್ನು ಪರಿಗಣಿಸದೆ ಯಾವ ಸ್ವಾರ್ಥಗಳು ಇಲ್ಲದೆ ಸಂಸಾರವನ್ನು ತ್ಯಜಿಸಿ ಬಂದು ಸಮಾಜದ ಕಲ್ಯಾಣಕ್ಕಾಗಿ ಅಹರ್ನಿಶಿ ಚಿಂತಿಸುತ್ತಿರುವ ತ್ಯಾಗಿಗಳಾಗಿರುವ ಯಾವ ಯತಿಗಳನ್ನು ನಿಂದಿಸಲು ನಾಲಿಗೆಯನ್ನು ಚಾಚಬೇಡಿ. ಇದರ ಅನರ್ಥವನ್ನು ಅನುಭವಿಸುವವರು ನಾವೇ ಆಗುತ್ತೇವೆ ಎಂಬುದನ್ನು ಮರೆಯಬೇಡಿ. ಕಾರಣ ಶ್ರೀಮದಾಚಾರ್ಯರ ಕರಾರ್ಚಿತ ಅರ್ಚಾ ಮೂರ್ತಿಗಳನ್ನು ಆರಾಧಿಸುವ ಸಾಧಕರಿವರು. ಇವರ ಅಂತಃಸತ್ವವನ್ನು ಅಳೆಯುವ ಮಾನದಂಡ ನಮ್ಮ ಬಳಿ ಖಂಡಿತ ಇರುವುದಿಲ್ಲ. ಇದೊಂದು ನಿರ್ಮಲ ಮನಸ್ಸಿನ ವಿಜ್ಞಾಪನೆಯಷ್ಟೇ. ಒಬ್ಬ ವ್ಯಕ್ತಿಯ ಜೈ ಕಾರಕ್ಕೆ ಈ ಲೇಖನ ಸೀಮಿತವಾಗಿರುವುದಿಲ್ಲ. ಎಲ್ಲ ಯತಿಗಳಲ್ಲಿ ಪೂಜ್ಯ ಭಾವದಿಂದಲೇ ವರ್ತಿಸುವ ಬುದ್ಧಿ ನಮಗೆ ಉಂಟಾಗಲಿ ಎಂಬ ಹಿತ ಚಿಂತನೆಯಿಂದ ತಿಳಿಸಿದ ಸತ್ಯಸಂಗತಿಯಷ್ಟೇ .

ಹರೇ ಶ್ರೀನಿವಾಸ
ಗುರೋ ರಾಘವೇಂದ್ರ

ಇತಿ ಸಜ್ಜನ ವಿಧೇಯ ರಾಘವೇಂದ್ರ ಗುರು ಚರಣದಾಸ

19/07/2023
20/09/2022

"ಶ್ರೀವಸುಧೇಂದ್ರಾರ್ಯರ ಪ್ರಿಯ ಶ್ರೀಮೂಲರಾಮನನ್ನು ಶ್ರೀಜಗನ್ನಾಥದಾಸರು ಕಂಡ ಸೊಬಗು"

ಶ್ರೀಮನ್ಮಧ್ವಾಚಾರ್ಯರ ಮೂಲಪೀಠದ ಮೇಲೆ ವಿರಾಜಿಸಿದ ಯತಿಸಾರ್ವಭೌಮ ಶ್ರೀವಸುಧೇಂದ್ರತೀರ್ಥರ ಕರದೊಳು ಮೆರೆವ ಶ್ರೀಮನ್ಮೂಲರಾಮನನ್ನು ಶ್ರೀವರದೇಂದ್ರತೀರ್ಥರ ವಿದ್ಯಾಶಿಷ್ಯರಾದ ಶ್ರೀಜಗನ್ನಾಥದಾಸರು "ಶ್ರೀವಸುಧೇಂದ್ರಾರ್ಯರಪ್ರಿಯ" ಎಂದು ಕೊಂಡಾಡಿ ಸ್ತೋತ್ರ ಮಾಡಿರುವುದು.

ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ
ತಾಮರಸಸಖ ಸುವಂಶಾಬ್ಧಿಶರತ್ಸೋಮಾ ಕಮಲಧೀಮ || ಪ||

ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ ಅಜ ಪೂಜಿಸಿದ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ ಕಾಮಿತ ನೆರೆದಾ |
ಭೂತಾಧಿಪ್ಪನ ಭವನದೊಳರ್ಚನೆಗೊಂಡ ದೃತಕೋದಂಡ
ಮಾತಂಗಾರಿ ವರೂಥಿಯ ಜನಕ ಮೇದಗಾರಕೆ ಪೋದ || 1 ||

ಎಂದು ಚತುರ್ಮುಖ ಬ್ರಹ್ಮಕರಾರ್ಚಿತ ಶ್ರೀಮೂಲರಾಮದೇವರು ಬಂದ ಬಗೆಯನ್ನು ವರ್ಣಿಸಿ ಮುಂದಿನ ನುಡಿಗಳಲ್ಲಿ,
...........
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದಾ || 3 ||

ಅಲವಬೋಧಮುನಿ ಅತಿಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೋದ |
ಬಲು ನಂಬಿದ ಭಕುತರ ಕಲಿಮಲಗಳ ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುಧೇಂದ್ರಾರ್ಯರ ಪ್ರೀಯ ಕವಿಜನಗೇಯ || 4 ||
... ...

ಶ್ರೀಮದಾಚಾರ್ಯರ ಆಜ್ಞೆಯನ್ನು ಶಿರಸಾವಹಿಸಿ, ಅತ್ಯಂತ ಭಕ್ತಿಯಿಂದ ಅವನನ್ನು ಸ್ತೋತ್ರ ಮಾಡಿದ ಮಧ್ವರ ಸಾಕ್ಷಾತ್ ಶಿಷ್ಯರಾದ ಶ್ರೀನರಹರಿತೀರ್ಥರಿಗೆ ಸೀತಾಸಮೇತನಾಗಿ ಒಲಿದು ಬಂದು ನಲಿದಾತ ಶ್ರೀಮೂಲರಾಮ.

ಶ್ರೀಮನ್ಮಧ್ವಾಚಾರ್ಯರು ಅತ್ಯಂತ ವೈಭವದಿಂದ ಅರ್ಚಿಸಿ ಮೆಚ್ಚಿಸಿದ ಪ್ರತಿಮೆಯೇ ಶ್ರೀಮನ್ಮೂಲರಾಮಚಂದ್ರನ ಪ್ರತಿಮೆ,
ಮುಂದೆ ಶ್ರೀಮದಾಚಾರ್ಯರ ಸತ್ಪರಂಪರೆಯಲ್ಲಿ ಬಂದಂತಹ ಶ್ರೀಜಯತೀರ್ಥರು, ಶ್ರೀವಿಜಯೀಂದ್ರತೀರ್ಥರು ಹಾಗೂ ಶ್ರೀರಾಘವೇಂದ್ರತೀರ್ಥರು, ಶ್ರೀಸುಮತೀಂದ್ರತೀರ್ಥರೇ ಮೊದಲಾದ ತಪಸ್ವೀ ಗ್ರಂಥಕಾರ ಯತಿವರೇಣ್ಯರಿಂದ ಬಹುಪ್ರಕಾರವಾಗಿ ಪೂಜೆಗೊಂಡ ಪ್ರತಿಮೆಯೇ ಶ್ರೀಮನ್ಮೂಲರಾಮ ಪ್ರತಿಮೆ,

ಅದೇ ಪ್ರತಿಮೆಯನ್ನು ತಮ್ಮ ಕಣ್ಣ ಮುಂದೆಯೇ ಶ್ರೀವಾದೀಂದ್ರತೀರ್ಥ ಕರಕಮಲ ಸಂಜಾತರಾದ ಶ್ರೀವಸುಧೇಂದ್ರತೀರ್ಥರು ಮಹಾಪೂಜೆಯನ್ನು ಕಣ್ತುಂಬಿಕೊಂಡು "ಶ್ರೀವಸುಧೇಂದ್ರಾರ್ಯರ ಪ್ರಿಯ" ಅಜಪೂಜಿಸಿದ ಈ ಮೂಲರಾಮ ಎಂದು ವರ್ಣಿಸಿ ಶ್ರೀರಾಮನನ್ನು ಸ್ತೋತ್ರ ಮಾಡಿದ್ದಾರೆ ಶ್ರೀಜಗನ್ನಾಥದಾಸರು.

ಶ್ರೀಜಗನ್ನಾಥದಾಸರ ಕೃತಿಯ ಪೂರ್ಣ ಪಾಠ ಈ ಕೇಳಗಿನಂತಿದೆ :

ರಾಮನ್ನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ || ಪ ||
ತಾಮರಸ ಸಖ ಸುವಾಂಶಾಬ್ಧಿ ಶರತ್ಸೋಮಾ ಕಮಲಧೀಮ || ಅ.ಪ. ||

ಧಾತನ ಅನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದಾ ಅಜ ಪೂಜಿಸಿದಾ
ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದಾ ಕಾಮಿತ ನೆರೆದಾ
ಭೂತಾಧಿಪನ ಭವನದೊಳರ್ಚನೆಗೊಂಡಾ ದೃತ ಕೋದಂಡಾ
ಮಾತಂಗಾರಿ ವರೂಥಿಯ ಜನಕ ಮೇದಾಗಾರಕೆ ಪೋದಾ || 1 ||

ಸೌಭಾರಿ ಮುನಿಪಗೆ ಸೌಖ್ಯವ ಕರುಣಿಸಿ ಕೊಟ್ಟ ಜಗಕತಿ ದಿಟ್ಟ
ನಾಭಿ ಜನ್ಮನಿಹ ನಗವರ ಸ್ಥಾನಕೆ ಬಂದ ಶುಭಗಣ ವೃಂದಾ ವೈಭವದಿಂದಲಯೋಧ್ಯಾ ನಗರದಿ ಮೆರೆದಾ ಕಾಮಿತವೆರೆದಾ
ಸ್ವಾಭಿಮಾನದಲಿ ಸತಿಯಳಿಗಿತ್ತನು ವರವಾ ದೇವರ ದೇವಾ || 2 ||

ಜಾಂಬವಂತನಿಗೆ ಜಾನಕಿ ರಮಣನು ಇತ್ತ ತನ್ನಯ ಧ್ಯಾತ
ಸಂಭ್ರಮದಲಿ ವೇದಗರ್ಭನೊಡನಾಡ್ದಾ ಮುಕ್ತಿಯ ನೀಡ್ದಾ
ಕುಂಭೀಶ್ವರನ ಸುಕೋಶದಿ ಬಹುದಿನ ವಾಸ ವೆಸಗಿದನೀಶಾ
ನಂಬಿ ತುತಿಸಿದ ನರಹರಿ ಮುನಿಪಗೆ ಒಲಿದಾ ಮೋದದಿ ನಲಿದ || 3 ||

ಅಲವಬೋಧಮುನಿ ಅತಿ ಮೋದದಲರ್ಚಿಸಿದ ಸಲೆ ಮೆಚ್ಚಿಸಿದ
ಇಳೆಯೊಳು ಬಹು ಯತಿಕರ ಪೂಜಿತನಾದ ಲೀಲ ವಿನೋದಾ
ಬಲು ನಂಬಿದ ಭಕುತರ ಕಲಿಮಲಿಗಳ ಕಳೆದ ಮನದೊಳು ಪೊಳೆದ
ಸುಲಲಿತ ಗುಣನಿಧಿ ವಸುದೇಂದ್ರಾರ್ಯರ ಪ್ರಿಯ ಕವಿಜನ ಗೇಯ || 4 ||

ವಾರಿಧಿ ಬಂಧನ ವಾನರ ನಾಯಕರಾಳ ದೈತ್ಯರ ಸೀಳ್ದಾ
ನಾರದ ಮುಖ ಮುನಿನಮಿತ ಪದಾಂಬುಜನೀತಾ ತ್ರಿಗುಣಾತೀತ
ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವಾ ದುರಿತವ ತಡೆವ
ನೀರಜಾಕ್ಷ ಜಗನ್ನಾಥ ವಿಠ್ಠಲ ನಿಶ್ಚಿಂತಾ ಸೀತಾಕಾಂತ ||5 ||

21/03/2022

ಸೋದಾಪುರಾಧೀಶ ಭಾವೀಮುಖ್ಯಪ್ರಾಣರಾದ ಶ್ರೀಮದ್ವಾದಿರಾಜಪ್ರಭುಗಳು

ಶ್ರೀಮನ್ಮಧ್ವಾಚಾರ್ಯರ ಪೂರ್ವಾಶ್ರಮದ ಅನುಜರಾಗಿ ಅವತರಿಸಿ, ಶ್ರೀಮನ್ಮಧ್ವಾಚಾರ್ಯರಿಂದ ಉಪದೇಶವನ್ನು ಪಡೆದು ಅವರ ಪದಕಮಲಗಳನ್ನು ಸೇವಿಸಿ ಧನ್ಯರಾದ ಮಾಹಾಭಾಗ್ಯಶಾಲಿಗಳು ಶ್ರೀವಿಷ್ಣುತೀರ್ಥರು.

ಶ್ರೀವಿಷ್ಣುತೀರ್ಥರ ಚರಿತ್ರೆಯನ್ನು, ಅವರ ಮಹಿಮೆಯನ್ನು ಅತ್ಯಂತ ಭಕ್ತ್ಯಾದರಗಳಿಂದ ಶ್ರೀನಾರಾಯಣಪಂಡಿತಾಚಾರ್ಯರು ಶ್ರೀಸುಮಧ್ವವಿಜಯದಲ್ಲಿ ಉಲ್ಲೇಖಿಸಿದ್ದಾರೆ. ಇವರ ಭವ್ಯಸ್ವರೂಪದ ರೋಮಾಂಚನಕಾರಿ ವರ್ಣನೆಯನ್ನು ಮಾಡಿದ್ದಾರೆ. ಶ್ರೀಮದಾಚಾರ್ಯರು ಹಾಗೂ ಶ್ರೀವಿಷ್ಣುತೀರ್ಥರನ್ನು "ವೇದಾಂತಗುರುಸೋದರ"ರು ಎಂದು ಉಲ್ಲೇಖಿಸಿದ್ದಾರೆ. ಅವರ ತೀರ್ಥಯಾತ್ರೆ, ತಪೋವೈಭವ, ಆ ತಪ್ಪಸ್ಸಿನ ತೀವ್ರತೆ, ಅಸಂಪ್ರಜ್ಞಾತಸ್ಥಿತಿಯಲ್ಲಿ ಅವರು ಮಾಡಿದ ಭಗವದ್ದರ್ಶನ, ಈ ಎಲ್ಲ ಅಪೂರ್ವಸಿದ್ಧಿಗಳನ್ನು ಹೊಂದಿದ ಮಹಾನುಭಾವರು ಶ್ರೀವಿಷ್ಣುತೀರ್ಥರು.

ಶ್ರೀಮಧ್ವಾನುಜಾಚಾರ್ಯರು ಎಂದೇ ಮಾಧ್ವಪರಂಪರೆಯ ಜ್ಞಾನಿವರೇಣ್ಯರಿಂದ ಸ್ತುತಿಸಲ್ಪಡುವ ಮಹಾ ತಪಸ್ವೀಶ್ರೇಷ್ಠರಾದ, ದೈವಾಂಶಸಂಭೂತರಾದ ಶ್ರೀವಿಷ್ಣುತೀರ್ಥರೇ ಅಷ್ಟಮಠಗಳಲ್ಲಿ ಒಂದಾದ 'ಕುಂಭಾಶಿ' ಮಠಕ್ಕೂ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೂ ಮೂಲಪುರುಷರು.

ಅವರ ದಿವ್ಯಪರಂಪರೆಯಲ್ಲಿ ಶ್ರೀವಾಗೀಶತೀರ್ಥ ಶ್ರೀಮಚ್ಚರಣರ ಕರಕಮಲಸಂಜಾತರಾಗಿ ಧರೆಗಿಳಿದು ಬಂದವರೇ ಭಾವೀಹನೂಮಚ್ಚಕ್ರವರ್ತಿಗಳಾದಂತಹ ಶ್ರೀಶ್ರೀವಾದಿರಾಜತೀರ್ಥ ಗುರುಸಾರ್ವಭೌಮರು.

ಆಚಾರ-ವಿಚಾರ, ಸಂಪ್ರದಾಯಗಳ ಪರಿಪಾಲನೆ, ತಪಶ್ಚರ್ಯೆ ಎಲ್ಲದರಲ್ಲೂ ಪ್ರತಿಯೊಂದು ಚರ್ಯೆಯಲ್ಲೂ ಪೂರ್ವಾಚಾರ್ಯರ, ವಿಶೇಷವಾಗಿ ಮಧ್ವಸಾದೃಶ್ಯ.

ಸಶರೀರ ವೃಂದಾವನಪ್ರವೇಶ. ಸಂಸ್ಕೃತ- ಕನ್ನಡ - ತುಳು ಭಾಷೆಗಳಲ್ಲಿ ಶತಾಧಿಕ ಗ್ರಂಥಗಳ ನಿರ್ಮಾಣ. ವೇದಾಂತದಲ್ಲಿ ಭಾಷ್ಯಗ್ರಂಥಗಳು, ಟೀಕಾಗ್ರಂಥಗಳು, ಟಿಪ್ಪಣೀಗ್ರಂಥಗಳು, ಕಾವ್ಯಗ್ರಂಥಗಳು, ವಿಮರ್ಶಾಗ್ರಂಥಗಳು, ಸ್ತೋತ್ರಸಾಹಿತ್ಯ, ಹೀಗೇ ಬಹುಪ್ರಕಾರವಾಗಿರುವ ಅವರ ಗ್ರಂಥರಚಾನಾ ಸಾಮರ್ಥ್ಯ. ಗ್ರಂಥಗಳಲ್ಲಿ ತೋರುವ ಸಂಪ್ರದಾಯ-ಸಿದ್ಧಾಂತ ನಿಷ್ಠೆ. ಪ್ರಮೇಯಗಳನ್ನು ಹೇಳುವ ನಿರ್ದುಷ್ಟವಾದ, ಮನೋಹರ ಶೈಲಿ.
ವಿಶ್ವಾಸವಿಟ್ಟವರಿಗೆ ಎಚ್ಚರದಂತೆ ಕಾಣುವ, ವಿಶ್ವಾಸವಿಲ್ಲದವರಿಗೆ ಚಾಟಿ ಏಟಿನಂತೆ ತೋರುವ ಅವರ ವಾಣಿವಿಲಾಸ. ವಿಷಯಸಾಧನೆಗೆ ಪೂರಕವಾಗಿ ಯುಕ್ತಿಯನ್ನು ಹಣೆದು ಸವಿಯನ್ನು ಉಣಬಡಿಸುವ ಅವರ ನಿರಂಕುಶ ವಾಗ್ಝರಿ. ಸಾಹಿತ್ಯ-ಕಾವ್ಯ-ನಾಟಕ-ಅಲಂಕಾರಾದಿ ಶಾಸ್ತ್ರಗಳಲ್ಲಿ ಅವರಿಗಿರುವ ನಿಪುಣತೆ. ವೇದಾಂತಾದಿ ಶಾಸ್ತ್ರಗಳಲ್ಲಿ ಅವರಿಗಿರುವ ಅದ್ಭುತ ಹಿಡಿತ. ಗ್ರಂಥಗಳಲ್ಲಿ ಯುಕ್ತಯುತವಾಗಿ ಅವರು ಉದಾಹರಿಸುವ, ಶತಮಾನಗಳೂ ಉರುಳಿದರೂ ನಿತ್ಯನೂತನವೆನಿಸುವ ಅವರ ಹಿತೋಪದೇಶಗಳು. ಚಿರಸ್ಥಾಯಿಯಾಗಿರುವಂತಹ ಅವರ ಕಾಲದಲ್ಲಿ ಅವರು ಮಾಡಿದ ಲೋಕೋತ್ತರ ವ್ಯಾಪಾರಗಳು. ಇವಲ್ಲದಕ್ಕೂ ಶ್ರೀವಾದಿರಾಜ ಗುರುಸರ್ವಭೌಮರಿಗೇ , ಶ್ರೀವಾದಿರಾಜರಗುರು ಸಾರ್ವಭೌಮರೇ ಸಾಟಿ!!!

ಅವರ ಈ ಭವ್ಯಮಹಿಮೆಯ ದ್ಯೋತಕವಾಗಿಯೇ ವೃತ್ತರತ್ನಸಂಗ್ರಹದಲ್ಲಿ,

"ಸವಿನೋದಂ ಸಾಟ್ಟಹಾಸಂ ಸಸ್ಮಿತಂ ಸುಸ್ವರಾನ್ವಿತಮ್ |
ಸರಹಸ್ಯಂ ಸಪ್ರಮಾಣಂ ವಾದಿರಾಜವಚೋsಮೃತಮ್ ||"

ವಾದಿರಾಜರ ಮಾತುಗಳು ಅರ್ಥಾತ್ ಅವರ ಅಸ್ಖಲಿತ ವಾಣಿಯು ವಿನೋದದಿಂದ ಕೂಡಿವೆ , ಅಟ್ಟಹಾಸದಿಂದ ( ದುರ್ವಾದಿಗಳಿಗೆ ಎಚ್ಚರಿಕೆ ಕೊಡುವಲ್ಲಿ ಅಟ್ಟಹಾಸ) ತುಂಬಿವೆ , ಮಂದಹಾಸವನ್ನು ಬೀರುತ್ತವೆ , ಉತ್ತಮ ಸ್ವರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ರಹಸ್ಯಾರ್ಥವಿದೆ , ಪ್ರಮಾಣ ಬದ್ಧವಾಗಿರುತ್ತವೆ , ಪ್ರಮಾಣಗಳಿಂದ ಕೂಡಿರುತ್ತವೆ. ಹೀಗೆ ರಾಜರ ಬಗ್ಗೆ ಆಡಿದ ಮಾತುಗಳು ಅತಿಶಯವೆನಿಸುವದಿಲ್ಲ . ಅದು ಅವರ ವಾಣಿಯ ಮಹಿಮೆ.


ಹೀಗೆ ಮಹಾನುಭಾವರಾದ ಭಾವಿ ಸಮೀರ ವಾದಿರಾಜರ ಮಾತುಗಳ ಬಗ್ಗೆ ಕವಿ ಆಡಿರುವ ಮಾತುಗಳು ಅತಿಶಯ ಎನ್ನಿಸುವದೇ ಇಲ್ಲ . ಅವರ ಗ್ರಂಥಗಳಲ್ಲಿ ಇದರ ಪ್ರತ್ಯಕ್ಷ ಅನುಭವ ಸರ್ವಾಥಾ ಆಗದೇ ಇರದು.ಭಾವೀಸಮೀರರ ವಾಗ್ವೈಖರಿಯನ್ನು ಅನೇಕ ಜ್ಞಾನಿಗಳು ಇದೆ ಕ್ರಮದಲ್ಲಿ ವರ್ಣಿಸಿದ್ದಾರೆ.

ಓರ್ವ ಯತಿಗಳಾಗಿ ಪ್ರಾಯಃ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರು ಇವರ ಹಾಗೆ ಮತ್ತೊಬ್ಬರಿಲ್ಲ.

ಪ್ರೌಢವೇದಾಂತಗ್ರಂಥಗಳು,ಸ್ವತಂತ್ರಪ್ರಬಂಧವೆನಿಸುವ ಗ್ರಂಥಗಳು, ನಿತ್ಯಪಠನೀಯ ಸ್ತೋತ್ರಗಳು, ಅನುಸಂಧಾನಕ್ಕೆ ಯೋಗ್ಯವಾದ ಪದ-ಪದ್ಯಗಳು, ಕಮನೀಯ ಕಾವ್ಯಗಳು, ತೀರ್ಥಪ್ರಬಂಧದಂತಹ ಅಪೂರ್ವಕೃತಿಗಳು ಹೀಗೆ ರಾಜರ ಕೊಡೆಗೆಯನ್ನೂ ಎಷ್ಟು ಸ್ಮರಿಸಿದರೂ ಸಾಲದು.

ಅವರ ಗ್ರಂಥವೈಭವ ಈ ರೀತಿಯದ್ದಾದರೇ, ಅವರು ಮಾಡಿದ ಅನೇಕ ವಾದಿದಿಗ್ವಿಜಯಗಳು, ಪವಾಡಗಳು, ಸಜ್ಜನರ ಮೇಲೆ ಅವರು ಮಾಡಿದ ಅನುಗ್ರಹ ಎಲ್ಲವೂ ಜನನಿತ. ಇದೆಲ್ಲದರ ಜೊತೆಗೆ ಶ್ರೀವಾದಿರಾಜರು ಬೀರಿದ ಸಾಮಾಜಿಕ ಪ್ರಭಾವ ಗಣ್ಯವಾದುದು.

ಸೋದೆಯಲ್ಲಿ ರಮಾತ್ರಿವಿಕ್ರಮ ದೇವರೇ ಮೊದಲಾದ ದೇವತಾ ಪ್ರತಿಷ್ಠಾನ, ಅವರ ಆಖ್ಯಾನದ
"ಅಹಂ ಬ್ರಹ್ಮಾ ಚ ವಾಯುಶ್ಚ ವಿಷ್ಣುರುದ್ರಶ್ಚ ಪಂಚಮ
ರಮಾಮ ನಿತ್ಯಮೇವಾತ್ರ ಶ್ವೇತದ್ವೀಪೆ ಯಥಾ ವಯಮ್ || "
ಎಂಬ ಮಾತಿಗೆ ಸಂವಾದಿಯಾಗಿ ಸಜ್ಜನರ ಉದ್ಧಾರಕ್ಕಾಗಿ ಅವರು ಪ್ರತಿಷ್ಠಾಪಿಸಿದ ದೇವತಾಮೂರ್ತಿಗಳು. ಧರ್ಮಸ್ಥಳದಲ್ಲಿ ಅವರು ಮಾಡಿದ ಮಹಾರುದ್ರದೇವರ ಪ್ರತಿಷ್ಠೆ.

ಉಡುಪಿಯ ಭೈಷ್ಮೀ-ಮಧ್ವಕರಾರ್ಚಿತ ಶ್ರೀಕೃಷ್ಣದೇವರ ಪೂಜಾಕೈಂಕರ್ಯವನ್ನು ಸುಲಲಿತಗೊಳಿಸಲು ಎರೆಡು ತಿಂಗಳ ಪರ್ಯಾಯವನ್ನು, ಎರೆಡು ವರ್ಷಗಳಿಗೆ ವಿಸ್ತರಿಸಿದ ಅವರ ನಿರ್ಧಾರ.

ಇತಿಹಾಸದಲ್ಲಿ ಅವರು ಜರುಗಿಸಿದ ಐದು ಐತಿಹಾಸಿಕ ಶ್ರೀಕೃಷ್ಣದೇವರ ಪೂಜಾಕೈಂಕರ್ಯದ ಪರ್ಯಾಯಗಳು. ಒಂದು ನೂರಾ ಇಪ್ಪತ್ತು ವರ್ಷಗಳ ಕಾಲ ಬಾಳಿ ಬದುಕಿ ಎಲ್ಲರನ್ನೂ ಅನುಗ್ರಹಿಸಿದ ಅವರ ಕಾರುಣ್ಯ. ಶ್ರೀಕೃಷ್ಣನ ಎದುರಿಗೆ ಅಯೋಧ್ಯೆಯಿಂದ ಬಂದ ಶ್ರೀಮುಖ್ಯಪ್ರಾಣದೇವರ ಹಾಗೂ ಶ್ರೀಗರುಡದೇವರ ಪ್ರತಿಷ್ಠೆ.

ಶ್ರೀಕೃಷ್ಣದೇವರ ಎದುರುನಲ್ಲಿಯೇ ನೇರವಾಗಿ ಇರುವ ರಥಬಿದಿಯ ಸ್ಥಳದಲ್ಲಿ ತಮ್ಮ ಅತ್ಯಾಪ್ತಮಿತ್ರರಾಗಿದ್ದ ಶ್ರೀಪದ್ಮನಾಭತೀರ್ಥರ ಪರಂಪರೆಯ ಭೂಷಾಮಣಿಗಳಾದ ಶ್ರೀವಿಜಯೀಂದ್ರಗುರುಸಾರ್ವಭೌಮರಿಗೆ ಅವರು ಕಟ್ಟಿಸಿ ಕೊಟ್ಟು ಅವರು ತೋರಿದ ಸೌಹಾರ್ದ ಮನೋಭಾವ. (ಆ ಮಠದಲ್ಲಿಯೇ ಶ್ರೀರಾಘವೇಂದ್ರಗುರುಸಾರ್ವಭೌಮರು ಚಂದ್ರಿಕಾಪ್ರವಚನ, ಚಂದ್ರಿಕಾಪ್ರಕಾಶ, ನ್ಯಾಯಮುಕ್ತಾವಲೀ ಮೊದಲಾದ ಉದ್ಗ್ರಂಥಗಳ ನಿರ್ಮಾಣವನ್ನು ಮಾಡಿದ್ದು.)

ಇಂತಹ ಅನೇಕ ಲೋಕೋಪಕಾರಿ ಚರ್ಯೆಯನ್ನು ಶ್ರೀಭಾವೀಸಮೀರ ವಾದಿರಾಜರು ಜೀವನದುದ್ದಕ್ಕೂ ಪ್ರಕಟಿಸಿದ್ದಾರೆ. ಒಂದೊಂದು ಕಾರ್ಯಗಳನ್ನೂ ಮಾಧ್ವ ಸಮಾಜ ಸ್ಮರಿಸಲೇಬೇಕಾದ್ದು. ಈ ಎಲ್ಲವನ್ನೂ ಗಮನಿಸಿದಾಗ ಅವರು ಸತ್ಯಲೋಕಾಧಿಪತಿಯ ಪದವಿಯೋಗ್ಯರೇ ಅನ್ನುವದರಲ್ಲಿ ಯಾವ ಸಜ್ಜನರಿಗೂ ಸಂಶಯ ಹುಟ್ಟದು.

ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು, ಸಮಾಧಾನವಾಗದು, ಎಲ್ಲವನ್ನು ಹೇಳುವುದೂ ಮನುಷ್ಯಮಾತ್ರರಿಂದ ಸಾಧ್ಯವೇ ಇಲ್ಲ! ಅಂತಹ ಶ್ರೀವಾದಿರಾಜಗುರುಸಾರ್ವಭೌಮರು ಅವರ ಆರಾಧನಾ ಪರ್ವಕಾಲದ ದಿನದಂದು ನಮ್ಮನ್ನು ವಿಶೇಷವಾಗು ಅನುಗ್ರಹಿಸಿ ಶ್ರೀಮಧ್ವಸಿದ್ಧಾಂತದ ಅರಿವನ್ನು ಹುಟ್ಟಿಸುವಂತೆ ಅನುಗ್ರಹಿಸಿ ಜ್ಞಾನ-ಭಕ್ತಿ-ವೈರಾಗ್ಯಗಳನ್ನು ಕೊಟ್ಟು ಕೃಪಾದೃಷ್ಟಿಯನ್ನು ನಿರಂತರವಾಗಿ ಇಟ್ಟಿರಲಿ ಎಂದು ಪ್ರಾರ್ಥಸುತ್ತಾ..

ಶ್ರೀಕೃಷ್ಣಾರ್ಪಣಮಸ್ತು.

- ಸಮೀರ ಜೋಷಿ.

|| ಶ್ರೀಮನ್ಮೂಲರಾಮೋ ವಿಜಯತೆ ||                             ||ಶ್ರೀಗುರುರಾಜೋ ವಿಜಯತೆ||*ಹೊಸರಿತ್ತಿ ರಾಯರು: ಶ್ರೀಧೀರೇಂದ್ರತೀರ್ಥ ಶ್ರೀಪ...
16/03/2022

|| ಶ್ರೀಮನ್ಮೂಲರಾಮೋ ವಿಜಯತೆ || ||ಶ್ರೀಗುರುರಾಜೋ ವಿಜಯತೆ||

*ಹೊಸರಿತ್ತಿ ರಾಯರು: ಶ್ರೀಧೀರೇಂದ್ರತೀರ್ಥ ಶ್ರೀಪಾದಂಗಳವರು*

*ಪೂರ್ವಾಶ್ರಮ-*
ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ೧೦೦೮ ಶ್ರೀ ಧೀರೇಂದ್ರ ತೀರ್ಥರ ಬಗ್ಗೆ ಮಾತನಾಡಲು ನನ್ನ ಯೋಗ್ಯತೆ ಸಾಲದು. ಶ್ರೀ ರಾಘವೇಂದ್ರ ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದ ಶ್ರೀ ವಾದೀಂದ್ರ ತೀರ್ಥರ ಗುರುಸರ್ವಭೌಮರ ಪೂರ್ವಾಶ್ರಮ ಪುತ್ರರ ಹೆಸರು ಶ್ರೀ ಜಯರಾಮಚಾರ್ಯರು ಎಂದು. ಶ್ರೀ ಜಯರಾಮಾಚಾರ್ಯರು ತಮ್ಮ ಸಕಲ ವಿದ್ಯಾಭ್ಯಾಸಗಳನ್ನು ತಮ್ಮ ತಂದೆಗಳಾದ ಶ್ರೀ ಶ್ರೀನಿವಾಸಾಚಾರ್ಯರಲ್ಲಿ ಅರ್ಥಾತ್ ಶ್ರೀಮದಾಚಾರ್ಯರ ಪೀಠವನ್ನು ಶ್ರೀಮದುಪೇಂದ್ರ ತೀರ್ಥರ ನಂತರ ಆಳಿದ ಶ್ರೀ ವಾದೀಂದ್ರ ತೀರ್ಥ ಗುರುಸರ್ವಭೌಮರಲ್ಲೇ ಆಯಿತು. ಅವರಲ್ಲಿ ಜನ್ಮ ಪಡೆಯುವದಲ್ಲದೇ ಅವರಲ್ಲೇ ವಿದ್ಯಾಭ್ಯಾಸ ಮಾಡಿದ ಮಹಾ ಭಾಗ್ಯ ಶ್ರೀ ಧೀರೇಂದ್ರ ತೀರ್ಥ ಶ್ರೀಪಾದಂಗಳವರದ್ದು. ಆಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪರಮಾನುಗ್ರಹದಿಂದ ವಿಲಕ್ಷಣ ಪಾಂಡಿತ್ಯ ಗಳಿಸಿ ಪೂರ್ವಾಶ್ರಮದಲ್ಲೇ ದೇಶದ ಉದ್ದಗಲಕ್ಕೂ ಸಂಚರಿಸಿ ವಾದಿ ದಿಗ್ವಿಜಯ , ಶ್ರೀಮದಾಚಾರ್ಯರ ಸಿದ್ಧಾಂತ ಮಂಡನೆ ಇತ್ಯಾದಿಗಳನ್ನು ಮಾಡಿ ಸಂಸ್ಥಾನದ ಸೇವೆಗೈಯುತ್ತಿದ್ದರು. ಶ್ರೀ ವಾದೀಂದ್ರ ತೀರ್ಥರು ತತ್ವಪ್ರಕಾಶಿಕಾ ಟಿಪ್ಪಣಿಯಾದ 'ಮೀಮಾಂಸಾ ನಯದರ್ಪಣ' , 'ತತ್ವೊದ್ಯೋತ ಟಿಪ್ಪಣಿ ', 'ಭೂಗೋಳ-ಖಗೋಳ ವಿಚಾರಃ' , ' ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ರಾಘವೇಂದ್ರ ಮಠಾರ್ಚಾ ಗತಿಕ್ರಮ' , 'ಗುರುಗುಣಸ್ತವನಂ','ನವ್ಯದುರುಕ್ತಿ ಶಿಕ್ಷಾ (ಪೂರ್ವಾಶ್ರಮದಲ್ಲಿ ರಚಿಸಿದ್ದು)' ಹೀಗೆ ಅನೇಕ ಪ್ರೌಢ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಶ್ರೀ ರಾಘವೇಂದ್ರ ಗುರುಗಳ ಗ್ರಂಥರಚನ ಶೈಲಿ , ಸಾಮರ್ಥ್ಯ , ಮಹತ್ವ ಎಲ್ಲವನ್ನೂ ವಿಶಿಷ್ಟವಾಗಿ ಸ್ತವನ ಮಾಡುವ ಕೃತಿಯೇ "ಶ್ರೀಗುರುಗುಣಸ್ತವನ" . ಇದನ್ನು ಶ್ರೀ ವಾದೀಂದ್ರ ತೀರ್ಥರು ಶ್ರೀ ಗುರುಸಾರ್ವಭೌಮರಿಗೆ ಸಮರ್ಪಿಸಿದಾಗ ಶ್ರೀರಾಯರ ಮೂಲಬೃಂದಾವನವು ಅವರ ಸಮ್ಮತಿ ತಿಳಿಸಲು ಅಲುಗಾಡಿತು. ಅಂತಹ ಮಾಹಾನುಭಾವರು,ರಾಯರನ್ನು ಅರಿತವರು ಶ್ರೀ ವಾದೀಂದ್ರ ತೀರ್ಥರು. ಶ್ರೀ ಜಯರಾಮಚಾರ್ಯರು ಪ್ರೌಢಾವಸ್ಥೆಯಲ್ಲಿಯೇ 'ಗುರುಗುಣಸ್ತವನ'ದಲ್ಲಿ ಉತ್ಸುಕರಾಗಿ ,ಅದನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿ ಅದಕ್ಕೆ ತಮ್ಮದೇ ಒಂದು ಪ್ರೌಢ ವ್ಯಾಖ್ಯಾನ ರಚನೆ ಮಾಡಿ ಶ್ರೀ ವಾದೀಂದ್ರ ತೀರ್ಥ ಗುರುಸಾರ್ವಭೌಮರಲ್ಲಿ ಅದನ್ನು ಸಮರ್ಪಿಸಿದರು ( ಇದೆ ಗ್ರಂಥಕ್ಕೆ ಶ್ರೀ ವಾದೀಂದ್ರ ತೀರ್ಥರ ಪಟ್ಟದ ಶಿಷ್ಯ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವೂ ಇದೆ ) . ಆಗ ಶ್ರೀ ವಾದೀಂದ್ರ ತೀರ್ಥರು , ತಮ್ಮ ಪೂರ್ವಾಶ್ರಮ ಪುತ್ರರೂ ಹಾಗು ಸಂಸ್ಥಾನದ ಮಹಾ ಮೇಧಾವಿಗಳೂ ಆಗಿರುವ ಇವರು ಪೀಠಕ್ಕೆ ಬಂದರೆ ಸಂಸ್ಥಾನದ ಶ್ರೇಯೋಭಿವೃದ್ಧಿ ಆಗುವದು ಅನ್ನುವದನ್ನ ಅರಿತು ಆಚಾರ್ಯರಿಗೆ ಸೂಕ್ಷ್ಮವಾಗಿ " ಜಯರಾಮ ! ಇಷ್ಟಾದರೆ ಸಾಲದಪ್ಪ ನಿಜವಾದ ವೈರಾಗ್ಯ ಬೇಕು " ಎಂದು ನುಡಿದರು.

ಶ್ರೀ ಜಯರಾಮಚಾರ್ಯರು , ಶ್ರೀ ವಾದೀಂದ್ರರ ಮಾತಿನಂತೆ ವೈರಾಗ್ಯವನ್ನನುಸರಿಸುತ್ತ ಸಂಚಾರ ಪ್ರಾರಂಭ ಮಾಡಿದರು . ಇತ್ತ ಕಾಲ ಕ್ರಮೇಣ ಶ್ರೀ ವಾದೀಂದ್ರ ತೀರ್ಥರು , ಶ್ರೀ ವಸುಧೇಂದ್ರ ತೀರ್ಥರಿಗೆ ಮಹಾ ಸಂಸ್ಥಾನ ಒಪ್ಪಿಸಿ ಮಂತ್ರಾಲಯದಲ್ಲಿ ಶ್ರೀ ಗುರುರಾಜರ ವೃಂದಾವನದ ಪಕ್ಕದಲ್ಲಿ , ಶ್ರೀ ಗುರುರಾಜರಿಗಾಗಿಯೇ ಸಂಕಲ್ಪಿಸಿದ ವೃಂದಾವನವನ್ನು , ಗುರುರಾಜರ ಅಣತಿಯಂತೆ , ಆದೇಶದಂತೆ ಶ್ರೀ ವಾದೀಂದ್ರ ತೀರ್ಥರು ಪ್ರವೇಶಿಸಿದರು. ಈ ಘಟನೆಯೊಂದೆ ಸಾಕು ಗುರುರಾಜರು ಶ್ರೀ ವಾದೀಂದ್ರ ತೀರ್ಥರ ಮೇಲೆ ಅದೆಷ್ಟು ಪ್ರೀತಿ ತೋರಿದ್ದಾರೆ ? ಅದೆಷ್ಟು ಅನುಗ್ರಹ ಮಾಡಿದ್ದಾರೆ ? ಅಂತ ತಿಳಿಯಲು. ಹೀಗೆ ಶ್ರೀ ವಾದೀಂದ್ರ ತೀರ್ಥರು ವೃಂದಾವನಸ್ಥರಾದ ವಿಷಯ ಕೇಳಿ ಶ್ರೀ ಜಯರಾಮಚರ್ಯರಿಗೆ ಸಿಡಿಲು ಬಡಿದಂತಾಗಿ ಅನಾಥ ಪ್ರಜ್ಞೆ ಮೂಡಿತು. ಆಚಾರ್ಯರ ವೈರಾಗ್ಯವೃದ್ದಿಗೆ ಇದು ಸಹ ಕಾರಣವಾಯಿತು .

ಶ್ರೀ ವಾದೀಂದ್ರ ತೀರ್ಥರ ಹೃದ್ಗತ ವಿಷಯವನ್ನು ಅರಿತಿದ್ದ ಶ್ರೀ ವಸುಧೇಂದ್ರ ತೀರ್ಥರು , ಶ್ರೀ ಜಯರಾಮಚಾರ್ಯರನ್ನೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದರು . ಶ್ರೀಹರಿಯ ಸಂಕಲ್ಪ ಬೇರೆಯೇ ಇತ್ತು . ಶ್ರೀ ವಸುಧೇಂದ್ರ ತೀರ್ಥರು ಕೆಂಚನಗುಡ್ಡ ಪ್ರದೇಶದಲ್ಲಿ ಸಂಚಾರದಲ್ಲಿ ಇದ್ದಾಗ ದೇಹಾಲಸ್ಯವಾಗಿ ಶ್ರೀವರದೇಂದ್ರ ತೀರ್ಥರಿಗೆ ಆಶ್ರಮ ಪ್ರದಾನ ಮಾಡಿಸಿ ಅಲ್ಲಿಯೇ ವೃಂದಾವನಸ್ಥರಾದರು. ಮಹಾ ತಪಸ್ವಿಗಳಾಗಿದ್ದ ಶ್ರೀಗಳು ಇಂದಿಗೂ ಅಲ್ಲಿಯೇ ಸನ್ನಿಹಿತರಾಗಿ ಭಕ್ತರ ಅಭೀಷ್ಟ ಪೂರೈಸುತ್ತಿದ್ದಾರೆ. ಅಲ್ಲಿ ಯಾರಾದರೋ ದೇಹ ಶುದ್ಧಿ ಇಲ್ಲದೆ ಹೋದಲ್ಲಿ ಶಿಕ್ಷೆ ಮಾತ್ರ ಖಂಡಿತ . ಅಷ್ಟು ಜಾಗ್ರತ ಶ್ರೀ ವಸುಧೇಂದ್ರರ ಪುಣ್ಯ ಕ್ಷೇತ್ರ.

ಇತ್ತ ಶ್ರೀ ವಸುಧೇಂದ್ರ ತೀರ್ಥರಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವರದೇಂದ್ರ ತೀರ್ಥರು ಮಹಾ ತಪಸ್ವಿಗಳು , ದಾಸಶ್ರೇಷ್ಠರಾದ ಶ್ರೀ ಜಗನ್ನಾಥ ದಾಸರಿಗೆ ಶ್ರೀಮನ್ನ್ಯಾಯಸುಧಾ, ಚಂದ್ರಿಕಾದಿ ಗ್ರಂಥಗಳನ್ನು ಪಾಠ ಹೇಳಿ, ವಿದ್ಯೆ ಕೊಟ್ಟು ಸಲುಹಿದ ಮಹಾ ಗುರುಗಳು. ಶ್ರೀ ಜಯರಾಮಾಚಾರ್ಯರು ನೂತನ ಯತಿಗಳನ್ನು ಸಂಧಿಸಲು ಆಗಮಿಸಿದರು . ಒಮ್ಮೆ ಪುಣ್ಯನಗರಿ ( ಈಗಿನ ಪುಣೆಯಲ್ಲಿ) ಯಲ್ಲಿ ಪೇಶ್ವೆಗಳ ಪ್ರಧಾನ ನ್ಯಾಯಾಧೀಶನಾಗಿದ್ದ ಅದ್ವೈತಿ ಪಂಡಿತನೊಬ್ಬ ಶ್ರೀ ವರದೇಂದ್ರ ತೀರ್ಥರಿಗೆ ಬಹಿರಂಗವಾಗಿ ವಾದಿ ದಿಗ್ವಿಜಯಕ್ಕೆ ಆಹ್ವಾನ ನೀಡಿದ . ವಾದಕ್ಕೆ ವೇದಿಕೆ ಸಜ್ಜಾಯಿತು. ಶ್ರೀಯವರು ಗಾಂಭೀರ್ಯದಿಂದ ವಿರಾಜಮಾನರಾಗಿ ಪೇಶ್ವೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಿದ್ದ ಮರ್ಯಾದೆಗಳನ್ನೆಲ್ಲ ಸ್ವೀಕರಿಸಿದರು. ಆಮೇಲೆ ಪಣ ನಿರ್ಧಾರದ ಸಮಯ. ಆಗ ಪೆಶ್ವೆಯ ನ್ಯಾಯಾಧೀಶ ಗೆದ್ದೇ ಗೆಲ್ಲುವೆ ಎಂಬ ಅಹಂಕಾರದಿಂದ " ಶ್ರೀಗಳವರ ಬಣ ವಾದದಲ್ಲಿ ಸೋತರೆ ಸಂಸ್ಥಾನವನ್ನು ಬಿಟ್ಟು ಬಿಡಿ ಸನ್ಯಾಸಿಗಳಂತೆ ಅಡ್ದಾಡಬೇಕು" ಎಂದು ಹೇಳಿದ. ಅದಕ್ಕೆ ಶ್ರೀಯವರು ಮಂದಹಾಸ ಬೀರಿ " ಆಗಲಿ , ನೀವೇನಾದರೂ ಸೋತರೆ ಈ ಭವ್ಯವಾದ ಮನೆಯನ್ನು ನಮಗೆ ಬಿಟ್ಟುಕೊಟ್ಟು, ಗಡಿಪಾರು ಹೊಂದಬೇಕು " ಎಂದು ಹೇಳಿದರು . ಆಗ ಇಬ್ಬರ ಬಣಗಳೂ ಇದನ್ನೋಪ್ಪಿ ವಾದಕ್ಕೆ ಚಾಲನೆ ದೊರಕಿತು. ಬಹು ಕ್ಲಿಷ್ಟಕರ ವಾದ ವಿಷಯ ಎತ್ತಿಕೊಂಡು ಮಹಾ ಮೇಧಾವಿಯಾದ ಪಂಡಿತನು ತನ್ನ ವಾದ ಹೂಡಿದನು. ಆಗ ಅದಕ್ಕೆ ಶ್ರೀಯವರ ಬಣದಿಂದ ಶ್ರೀ ಜಯರಾಮಾಚಾರ್ಯರು ಎದ್ದು ನಿಂತು " ಇದಕ್ಕೆ ಶ್ರೀಗಳವರ ಅವಶ್ಯಕತೆ ಇಲ್ಲವೇ ಇಲ್ಲ " ಎಂದು ಹೇಳಿ ತಾವೇ ಎಲ್ಲ ಪೂರ್ವಪಕ್ಷಗಳನ್ನು ಧ್ವಂಸ ಮಾಡಿ ಪರವಾದಿಗಳಿಗೆ ಸಿಂಹಸ್ವಪ್ನರಾದರು. ಆಗ ಶಾಸ್ತ್ರಿಗೆ ತನ್ನ ಸೋಲು ಸನಿಹ ಬರುತ್ತಿದೆ ಎಂದು ತಿಳಿದು , ಶ್ರೀ ಜಯರಾಮಾಚಾರ್ಯರ ಮಾತನ್ನು ಎದುರಿಸಲಾಗದೆ " ಶ್ರೀಗಳವರೊಂದಿಗೆ ಮಾತ್ರ ನಾನು ವಾದ ಮಾಡುವೆ ಇತರರೊಡನೆ ಮಾಡುವದಿಲ್ಲ" ಎಂದು ನುಡಿದ. ಆಗ ಶ್ರೀಗಳವರು ನುಸು ನಕ್ಕು ತಮ್ಮದೇ ಶೈಲಿಯಲ್ಲಿ ವಾದಿಯನ್ನು ಮಣಿಸಿದರು. ಇದು ಐತಿಹ್ಯ. ಈ ಘಟನೆಯನ್ನು ಶ್ರೀವರದೇಶವಿಠಲದಾಸರು ಬಹು ಸುಂದರವಾಗಿ ವರ್ಣಿಸಿದ್ದಾರೆ. ಶ್ರೀಗಳವರ ಪರಮಾನುಗ್ರಹದಿಂದ ವಾದ ಮಾಡಿದ ಶ್ರೀಜಯರಾಮಾಚಾರ್ಯರ ಕೀರ್ತಿ ಬಹುಶ್ರುತವಾಯಿತು. ಆಗ ಶ್ರೀಗಳವರು ಜಯರಾಮಚಾರ್ಯರನ್ನು ಬಹುವಾಗಿ ಪ್ರಶಂಸಿಸಿ , ಸನ್ಮಾನಾದರಾದಿಗಳನ್ನೂ ಮಾಡಿಸಿ ಆಶೀರ್ವದಿಸಿ ಕಳುಹಿಸಿದರು.

*ಸನ್ಯಾಸ-*

ಹೀಗೆ ಶ್ರೀಜಯರಾಮಾಚಾರ್ಯರು ಶ್ರೀವಾದೀಂದ್ರ ಸ್ವಾಮಿಗಳವರ ಆಶೀರ್ವಾದ ಮತ್ತು ಅವರ ಅನುಗ್ರಹಾಶಯದಂತೆ ಗ್ರಹಸ್ತಾಶ್ರಮಿಗಳಾಗಿದ್ದರೂ ಪಾರಿವ್ರಾಜ್ಯ ವ್ರತವನ್ನು ಪಾಲಿಸುತ್ತಾ , ಊರಿನಿಂದ ಊರಿಗೆ ಸಂಚಾರ ಮಾಡುತ್ತ ಶ್ರೀಮನ್ಮಧ್ವಮತ ಪ್ರಸಾರಕಾರ್ಯದಲ್ಲಿ , ಸಜ್ಜನರ ಉಪಕಾರಕ್ಕಾಗಿ ಉದ್ಗ್ರಂಥಗಳ ಅಧ್ಯಯನ , ಅಧ್ಯಾಪನಾ, ಜ್ಞಾನಪಿಪಾಸುಗಳ ಉಪಕಾರಕ್ಕಾಗಿ ಗ್ರಂಥರಚನೆ ಇತ್ಯಾದಿಗಳನ್ನೂ ತಪ್ಪದೇ ನಡೆಸಿಕೊಂಡು ಹೋಗಿ ಶ್ರೀಹರಿವಾಯುಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗಿದ್ದರು. ಅನೇಕ ರಾಜರ ಆಸ್ಥಾನಗಳಲ್ಲಿ ಹೋಗಿ ಅಲ್ಲಿನ ಪರಮತೀಯ ಪಂಡಿತರನ್ನು ಗೆದ್ದು , ರಾಜರುಗಳಿಂದ ಸನ್ಮಾನಾದರಾದಿಗಳನ್ನು ಪಡೆದು ಮಧ್ವಮತ ದಿಗ್ವಿಜಯದ ಕಹಳೆಯನ್ನು ಯಾವಾಗಲು ಮೊಳಗಿಸುತ್ತಿದ್ದವರು ಶ್ರೀಜಯರಾಮಾಚಾರ್ಯರು.

ಒಮ್ಮೆ ಶ್ರೀ ಜಯರಾಮಚಾರ್ಯರು ಶ್ರೀ ವಿಜಯೀಂದ್ರತೀರ್ಥ ಗುರುಸಾರ್ವಭೌಮರ ಸನ್ನಿಧಾನವಾದ ಕುಂಭಕೋಣ ಕ್ಷೇತ್ರಕ್ಕೆ ದಯಮಾಡಿಸಿದ್ದರು. ಆಗ ವೃಂದಾವನದ ಎದುರಿಗೆ ಸಂಜೆ ಕುಳಿತಿದ್ದರು. ಆಗ ಶ್ರೀ ವಿಜಯೀಂದ್ರ ತೀರ್ಥರ ವೃಂದಾವನವನ್ನು ಅನುಸಂಧಾನ ಪೂರ್ವಕವಾಗಿ ನಮಸ್ಕರಿಸಿ, ಶ್ರೀವಿಜಯೀಂದ್ರ ತೀರ್ಥರ ಅಂತರ್ಯಾಮಿಗಳಾದ ಶ್ರೀಮಧ್ವಾಚಾರ್ಯರಿಂದ ಹಿಡಿದು ಶ್ರೀ ಸುರೇಂದ್ರ ತೀರ್ಥರ ವರೆಗೆ ಎಲ್ಲರನ್ನು ನಮಿಸಿ, ಶ್ರೀಮಠದ ಪರಮೋತ್ಕೃಷ್ಟ ಭವ್ಯ ಪರಂಪರೆಯನ್ನು ಅವರ ಗುರುಗಳವರೆಗೆ ಅನುಸಂಧಾನಪೂರ್ವಕವಾಗಿ ಅಲ್ಲಿಯೇ ಸ್ಮರಿಸುವಾಗ ತಮ್ಮ ಪೂರ್ವಾಶ್ರಮದ ಜನ್ಮದಾತರು , ವಿದ್ಯಾಗುರುಗಳೂ ಆದ ಶ್ರೀ ವಾದೀಂದ್ರ ಗುರುಗಳ ಸ್ಮರಣೆ ಬಂದಾಗ ಆಚಾರ್ಯರಿಗೆ ಮತ್ತೆ ಏನೋ ಭಾಸವಾಗುತ್ತಲಿತ್ತು. ಅವರು ಹೇಳಿದ “ಇಷ್ಟಾದರೆ ಸಾಲದು ಜಯರಾಮ ! ನಿಜವಾದ ವೈರಾಗ್ಯ ಬೇಕು " ಅನ್ನೋ ಮಾತು ನಿರಂತರ ಕಿವಿಯಲ್ಲಿ ಹರಿದಾಡುತ್ತಿತ್ತು. ಸಂಜೆ ಕಳೆದು ರಾತ್ರಿಯಾಯಿತು ಆಚಾರ್ಯರು ಮಾತ್ರ ಅಲ್ಲೇ ಕುಳಿತಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದರು , ಬೆಳಗಿನ ಜಾವ ಸ್ವಲ್ಪ ಜ್ಹೊಂಪು ಹತ್ತಿದಾಗ ಆಚರ್ಯರಿಗೆ ಸಾಕ್ಷಾತ್ ಶ್ರೀ ವಿಜಯೀಂದ್ರ ತೀರ್ಥ ಗುರುಸರ್ವಭೌಮರೇ ಬಂದು ನಿಂತು ಸನ್ಯಾಸ ದೀಕ್ಷೆಗೆ ಆದೇಶ ಮಾಡಿ , ದೀಕ್ಷೆ ನೀಡಿದರು . ಮರುದಿನವೇ ಶ್ರೀ ಆಚಾರ್ಯರು ವೃಂದಾವನದ ಸಾಕ್ಷಿಯಾಗಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಶ್ರೀಮದಾಚಾರ್ಯರ ಮುಖ್ಯ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವರದೇಂದ್ರ ತೀರ್ಥರ ಸನ್ನಿಧಾನಕ್ಕೆ ಹೊರಟರು. ಆಗ ಅಲ್ಲಿ ಶ್ರೀ ವರದೇಂದ್ರ ತೀರ್ಥರು ದೇಹಾಲಸ್ಯವಾಗಿದ್ದರಿಂದ ಜಯರಾಮಚಾರ್ಯರ ಆಗಮನವನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಆಚಾರ್ಯರು ಅಲ್ಲಿ ಇರದ ಕಾರಣ , ಯಾವುದೇ ಕಾರಣಕ್ಕೂ ಸಂಸ್ಥಾನದ ಉಪಾಸ್ಯಮೂರ್ತಿ ಬ್ರಹ್ಮಕರಾರ್ಚಿತ ಮೂಲರಾಮದೇವರ ಪೂಜೆಗೆ ವ್ಯತ್ಯಯ ಬರಬಾರದೆಂದು ನಿರ್ಧರಿಸಿ ಶ್ರೀ ಜಯರಾಮಚಾರ್ಯರ ಶಿಷ್ಯರೇ ಆದ ಶ್ರೀ ಭುವನೇಂದ್ರ ತೀರ್ಥರಿಗೆ ಸನ್ಯಾಸ ದೀಕ್ಷೆನೀಡಿ ಮೂಲರಾಮ ಪೂಜಾ ಕೈಂಕರ್ಯ ನೆರವೇರಿಸಲು ಆದೇಶಿಸಿದರು. ಶ್ರೀ ವರದೇಂದ್ರ ತೀರ್ಥರು "ಜಯರಾಮಚರ್ಯರಿಗೆ ಸಂಸ್ಥಾನ ಒಪ್ಪಿಸತಕ್ಕದ್ದು, ನಿಮ್ಮ ಉದ್ರ್ಗಂಥಗಳ ಅಧ್ಯಯನ ಅವರಲ್ಲಿಯೇ ಮಾಡತಕ್ಕದ್ದು " ಎಂದು ಹೇಳಿ ಕಾಲವಾದ ಮೇಲೆ ಶ್ರೀ ಭುವನೆಂದ್ರ ತೀರ್ಥರು ಶ್ರೀ ಧೀರೇಂದ್ರ ತೀರ್ಥರಿಗೆ ಮಹಾ ಸಂಸ್ಥಾನವನ್ನು ಒಪ್ಪಿಸಿ , ಶ್ರೀ ಮೂಲರಾಮದೇವರ ಪೆಟ್ಟಿಗೆಯನ್ನು ಒಪ್ಪಿಸಿ ಶಿರಸಾಷ್ಟಾಂಗ ನಮಸ್ಕಾರ ಮಾಡಿದರು. ಶ್ರೀಹರಿಯ ಇಚ್ಚೆಯಂತೆ ಮಹಾ ಸಂಸ್ಥಾನವನ್ನು ವಹಿಸಿಕೊಂಡಿದ್ದ ವಿಲಕ್ಷಣ ಪಾಂಡಿತ್ಯಾದಿ ಸದ್ಗುಣಗಳ ಖಣಿಯಾಗಿದ್ದ ನೂತನ ಯತಿಗಳು ಪರಮಹಂಸ-ಸರ್ವಜ್ಞ ಪೀಠದಲ್ಲಿ ಅಪರಿಮಿತ ತೇಜಸ್ಸಿನಿಂದ ಶೋಭಿಸಿದರು. ಪೂರ್ವಾಶ್ರಮದಲ್ಲೇ ಪರಮ ವೈರಾಗ್ಯದಿಂದ ಕಟ್ಟು-ನಿಟ್ಟಿನ ಜೀವನಕ್ರಮ ಅನುಸರಿಸುತ್ತ ಸನ್ಮತಸಂವರ್ಧನೆಯನ್ನು ಮಾಡುತ್ತಿದ್ದ ಶ್ರೀಧೀರೇಂದ್ರ ತೀರ್ಥ ಶ್ರೀಪಾದರ ಆಸ್ಥಾನ ಶ್ರೀಮದಾಚಾರ್ಯರ ಪೀಠಕ್ಕೆ ವಿಶೇಷ ಮೆರುಗು ನೀಡಿತ್ತು.
ಶ್ರೀಧೀರೇಂದ್ರತೀರ್ಥರು ಶ್ರೀವರದೇಂದ್ರತೀರ್ಥರ ಇಚ್ಛೆ ಹಾಗೂ ಆದೇಶದಂತೆ, ಶ್ರೀಮೂಲರಾಮನ ಪ್ರೇರಣೆಯಂತೆ ಶ್ರೀಮದಾಚಾರ್ಯರ ಮೂಲಮಹಾಸಂಸ್ಥಾನವನ್ನು ವಹಿಸಿಕೊಂಡು, ಶ್ರೀಮೂಲರಾಮ-ವೇದವ್ಯಾಸರ ಪೂಜೆಯನ್ನು ಮಾಡುತ್ತಿದ್ದುದನ್ನು ಅವರ ಸಾಕ್ಷಾತ್ ಶಿಷ್ಯರಾದ ಶ್ರೀಸಾತಾರಿ ಆಚಾರ್ಯರು ಗುರುಗಳ ಮೇಲೆ ರಚಿಸಿದ ಶ್ರೀಧೀರೇಂದ್ರಾಷ್ಟಾಕದಲ್ಲಿ "ವೇದವ್ಯಾಸ ಸುಮೂಲ ಸದ್ರಘುಪತೇಃ ಕುರ್ವನ್ ಸಪರ್ಯಾಂ ಮುಹುಃ" ಎಂದು ಉಲ್ಲೇಖಿಸಿದ್ದಾರೆ.
ಈ ರೀತಿಯಾಗಿ ನೂತನ ಯತಿಗಳು ತಮ್ಮ ಗುರುಗಳಾದ ಶ್ರೀವರದೇಂದ್ರರ ಆದೇಶದಂತೆ , ಶ್ರೀವರದೇಂದ್ರ ತೀರ್ಥ ಕರಕಮಲ ಸಂಜಾತರಾದ ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರನ್ನು ಶಿಷ್ಯರಾಗಿ ಸ್ವೀಕರಿಸಿ ,ಅವರಿಗೆ ಅಧ್ಯಯನ ಮಾಡಿಸುತ್ತ ದಿಗ್ವಿಜಯ ಯಾತ್ರೆ ಕೈಕೊಂಡರು. ಶ್ರೀಗಳು ಮಹಾರಾಷ್ಟ್ರದೇಶಕ್ಕೆ ದಿಗ್ವಿಜಯ ಬೆಳೆಸಿದರು. ಅಲ್ಲಿ ಸತಾರಾದಲ್ಲಿನ ರಜಾಧಿಕಾರಿಗಳು ಬಹಳ ಗೌರವಾದರಗಳಿಂದ ಮಹಾ ಸಂಸ್ಥಾನವನ್ನು ಬರಮಾಡಿಕೊಂಡರು. ಅಲ್ಲಿನ ರಾಜರ ವಿಶೇಷ ಮನವಿಯಂತೆ ಅವನ ರಾಜಧಾನಿಗೆ ಪಯಣಿಸಿ ವಿಶೇಷವಾಗಿ ಅನುಗ್ರಹಿಸಿ , ಮಹಾಸಂಸ್ಥಾನಕ್ಕೆ ಭಕ್ತಿ-ಕಾಣಿಕೆಗಳನ್ನು ಸ್ವೀಕರಿಸಿದರು. ಪೂನಾ ಕ್ಷೇತ್ರಕ್ಕೆ ಹೋಗಿ ಗುರುಗಳಾದ ಶ್ರೀ ವರದೇಂದ್ರ ತೀರ್ಥರ ವೃಂದಾವನ ದರ್ಶನ-ಮೂಲರಾಮದೇವರ ಪೂಜೆ-ಹಸ್ತೋದಕಾದಿಗಳನ್ನು ಮಾಡಿಕೊಂಡು , ಅಲ್ಲಿಂದ ಅನೇಕ ಪ್ರಾಂತಗಳಿಗೆ ದಿಗ್ವಿಜಯ ಕೈಕೊಂಡು ಅಲ್ಲಿನ ರಾಜರಿಂದಲೂ ಸಮ್ಮಾನೀತರಾಗಿ ಶ್ರೀಮನ್ಮಧ್ವಸಿದ್ಧಾಂತದ ವಿಜಯಪತಾಕೆಯನ್ನು ವಿಜೃಂಬಿಸುವಂತೆ ಮಾಡಿದರು.
ಶ್ರೀ ಧೀರೇಂದ್ರ ತೀರ್ಥರು ಅನೇಕ ವರ್ಷಗಳ ಶ್ರೀ ಮೂಲರಾಮಚಂದ್ರದೇವರ ಪೂಜೆಯನ್ನು ಮಾಡಿ ಸಂಸ್ಥಾನದ ಸಕಲ ರೀತಿಯ ಜವಾಬ್ದಾರಿಯನ್ನು ಶ್ರೀ ಭುವನೇಂದ್ರ ತೀರ್ಥ ಶ್ರೀಪಾದರಿಗೆ ವಹಿಸಿಕೊಟ್ಟು , ತಾವು ಜಪ-ತಪಗಳನ್ನಾಚರಿಸಲು ಹೊಸರಿತ್ತಿ ಗ್ರಾಮಕ್ಕೆ ಬಂದು ನೆಲೆಸಿದರು.
ಪುಣ್ಯತಮವಾದ ವರದಾ ನದಿ ತೀರದ ರಿತ್ತಿ ಗ್ರಾಮ ಜಪತಪಾದ್ಯನುಷ್ಠಾನಗಳಿಗೆ ಸೂಕ್ತವಾಗಿದ್ದರಿಂದ ಅಲ್ಲಿಯೇ ನೆಲಸಿಬಿಟ್ಟು , ಶ್ರೀಭುವನೇಂದ್ರ ಸ್ವಾಮಿಗಳಿಗೆ ಸಂಚಾರಕ್ಕೆ ಕಳುಹಿಸಿಕೊಟ್ಟರು. ಶ್ರೀಗಳವರು ಅಲ್ಲಿಯೇ ಇರುವದನ್ನು ಆರಿತ ಶ್ರೀವರದೇಂದ್ರ ತೀರ್ಥರ ಶಿಷ್ಯರಾದ ಜಗನ್ನಾಥದಾಸರು ಬಂದು "ಶ್ರೀ ಹರಿಕಥಾಮೃತ ಸರಾವನ್ನು" ಶ್ರೀ ಧೀರೇಂದ್ರ ತೀರ್ಥರ ಸನ್ನಿಧಾನದಲ್ಲೇ ಬರೆದು ಅವರಿಗೆ ಸಮರ್ಪಿಸಿದರು. ನಿತ್ಯ ಜಗನ್ನಾಥದಾಸರು ತಾವು ಬರೆದದ್ದನ್ನ ತೋರಿಸುವದು , ಶ್ರೀಗಳು ಅದನ್ನು ಓದಿ ಶಿಷ್ಯರಿಗೆ ಬಿಡಿಸಿ ಅರ್ಥವಾಗುವಂತೆ ಹೇಳಿ , ದಾಸರಿಗೆ ವಿಶೇಷ ಅನುಗ್ರಹ ಮಾಡುವದು ನಿತ್ಯದ ರೂಢಿಯಾಗಿತ್ತು. ಶ್ರೀಪಾದಂಗಳವರು ರಿತ್ತಿ ಗ್ರಾಮದಲ್ಲಿ ನೆಲೆಸಿದ್ದ ವಿಷಯವನ್ನರಿತು ಶ್ರೀಪ್ರಾಣೇಶದಾಸರೇ ಮೊದಲಾದವರು ಅವರ ಗುಂಪು ಸೇರಿದರು.
ಶ್ರೀಪಾದಂಗಳವರ ಅಗಾಧ ಪಾಂಡಿತ್ಯ-ಕೀರ್ತಿ-ದಿಗ್ವಿಜಯಯಾತ್ರೆಗಳ ಬಗ್ಗೆ ಕೇಳಿ ತಿಳಿತಿದ್ದ ಜ್ಞಾನಿಗಳಾದ ಉತ್ತರಾದಿಮಠದ ಶ್ರೀಸತ್ಯಬೋಧರು ಮಠಬೇಧವನ್ನು ಲೇಕ್ಕಿಸದೇ ಶ್ರೀಧೀರೇಂದ್ರ ಸ್ವಾಮಿಗಳನ್ನು ಕಾಣಲು ರಿತ್ತಿಗೆ ಬರುತ್ತಿದ್ದರು. ಈ ಎಲ್ಲ ಮಹಾನ್ ಮೇಧಾವಿ ಮೂರ್ಧನ್ಯರಾದ ಪರಮ ಶ್ರೇಷ್ಠ ಜ್ಞಾನಿಗಳ ಒಕ್ಕೂಟ ರಿತ್ತಿಯಲ್ಲೇ ಏರ್ಪಟ್ಟಿತ್ತು. ಅಲ್ಲಿ ನಡೆಯುತ್ತಿದ್ದ ಅಲೌಕಿಕ ಚರ್ಚೆಗಳ ಸಾರದ ಆನಂದ ಹೇಳತೀರದಾಗಿತ್ತು. ಅದನ್ನು ಅನುಭವಿಸಿದ ಪ್ರತ್ಯಕ್ಷದರ್ಶಿಗಳೇ ಪರಮಭಾಗ್ಯಶಾಲಿಗಳು. ಶ್ರೀಗಳು ಅಲ್ಲಿಯೇ ನೆಲೆಸಿ ಲೋಕಾಭಿರಾಮರಾಗಿ ಕುಳಿತಾಗ ಶ್ರೀಹರಿಯ ಪ್ರೇರಣೆಯಾಗಿ ಅವಸಾನಕಾಲ ಸಮೀಪಿಸಿತು ಎಂದು ತಿಳಿದರು. ವರದಾ ನದಿ ತೀರವಾದ , ಅವರ ಕಾರ್ಯಕ್ಷೇತ್ರವಾಗಿದ್ದ ರಿತ್ತಿ ಗ್ರಾಮದಲ್ಲೇ ಶ್ರೀಗಳ ವೃಂದಾವನ ಪ್ರತಿಷ್ಠೆ ನೆರವೇರಿತು. ಆಮೇಲೆ ಕಳಾಕರ್ಷಣ ಮಾಡಿಸಲು ಶ್ರೀಭುವನೇಂದ್ರರು ದೂರ ಸಂಚಾರದಲ್ಲಿ ಇದ್ದಿದ್ದರಿಂದ ಸಾಧ್ಯವಾಗಲಿಲ್ಲ.
ಶ್ರೀಗಳ ತಪಸ್ಸಿಗೆ ನಿದರ್ಶನ-
ವೃಂದಾವನ ಪ್ರವೇಶದ ೭ ವರ್ಷಗಳ ನಂತರ ಭಕ್ತರೋಬ್ಬರಿಗೆ ಸ್ವಪ್ನವಾಗಿ ಶ್ರೀಗಳ ದೇಹವನ್ನು ಕಳಾಕರ್ಷಣಕ್ಕಾಗಿ ಹೊರತೆಗೆಯಬೇಕೆಂದು ಆದೇಶವಾಯಿತು.ಇತ್ತ ವರದಾ ತೀರದ ತೋಟದ ಒಕ್ಕಲಿಗ ಮಾಲೀಕನಿಗೆ ಜಾಗೆಯನ್ನು ಶ್ರೀಗಳಿಗೆ ದಾನ ಮಾಡುವಂತೆ ಸ್ವಪ್ನವಾಯಿತು. ಅದರಂತೆ ದೇಹವನ್ನು ಹೊರತೆಗೆದಾಗ ಅನೇಕ ವರ್ಷಗಳ ಹಿಂದೆ ಹಚ್ಚಿದ್ದ ಗಂಧಾಕ್ಷತೆ-ತುಳಸಿಮಾಲೆ ಅಚ್ಚಳಿಯದೇ ಉಳಿದಿದ್ದನ್ನು ಕಂಡು ಶ್ರೀಗಳ ಅಪ್ರತಿಮ ತಪಶ್ಶಕ್ತಿಗೆ ತಲೆಬಾಗಿದರು. ಅಂದೇ ದೇಹವನ್ನು ಅಲಂಕರಿಸಿದಂತೆ ಇತ್ತು. ಸ್ವಪ್ನಾದೇಶದಂತೆ ಊರ ಮಧ್ಯದಲ್ಲಿದ್ದ ವೃಂದವನದಲ್ಲಿದ್ದ ದೇಹವನ್ನು ವರದಾ ತೀರದಲ್ಲೇ ಪ್ರತಿಷ್ಠೆಗೊಳಿಸಲಾಯಿತು. ಅಲ್ಲಿ ಮಂತ್ರಾಲಯದಂತೆ ಸೇವಾದಿಗಳು ನಡೆಯಲು ಪ್ರಾರಂಭವಾದವು. ಇಂದಿಗೂ ಶ್ರೀಗಳು ಅಲ್ಲಿ ಸನ್ನಿಹಿತರಾಗಿದ್ದು ತಮ್ಮ ಅಸ್ತಿತ್ವವನ್ನು ಭಕ್ತರ ಅಭೀಷ್ಟಗಳನ್ನ ಇಡೇರಿಸುವ ಮೂಲಕ ಸಾಬೀತು ಮಾಡುತ್ತಿದ್ದಾರೆ.

*ಶ್ರೀಗಳ ಗ್ರಂಥರಚನಾ ಸಾಮರ್ಥ್ಯ;*
ವಿದ್ವತ್ಪೂರ್ಣರಾದ ಶ್ರೀಧೀರೇಂದ್ರ ಪ್ರಭೃತಿಗಳು ಅನೇಕ ಪ್ರೌಢ ಗ್ರಂಥಗಳನ್ನ ರಚನೆ ಮಾಡಿದ್ದಾರೆ. ಅವುಗಳಲ್ಲಿ ಕೆಲವು ಉಪಲಬ್ಧವಿದ್ದರೆ ಇನ್ನು ಕೆಲವು ಅನುಪಲಬ್ಧ . ಇನ್ನು ಕೆಲವು ಭಾಗಶಃ ಸಿಕ್ಕರೆ , ಕೆಲೆವು ಗ್ರಂಥಗಳ ಹೆಸರು ಮಾತ್ರ ತಿಳಿದುಬಂದಿದೆ. ಕೆಲವುಗಳು ಪೂರ್ವಾಶ್ರಮದಲ್ಲೇ ರಚನೆ ಮಾಡಿದ್ದವುಗಳಾಗಿದ್ದರೇ , ಇನ್ನು ಕೆಲವು ತುರ್ಯಾಶ್ರಮದ ನಂತರ ರಚನೆ ಮಾಡಿದ್ದು. ವಿದ್ವತ್ಪ್ರಪಂಚದ ಅಮೂಲ್ಯ ಆಸ್ತಿ ಶ್ರೀಧೀರೇಂದ್ರ ಸ್ವಾಮಿಗಳ ಗ್ರಂಥಗಳು ;

೧. ಗುರುಗುಣಸ್ತವನವ್ಯಾಖ್ಯಾ ( ಜಯರಾಮಾಚಾರ್ಯಕೃತ ವ್ಯಾಖ್ಯಾ ) -

ಶ್ರೀವಾದೀಂದ್ರ ತೀರ್ಥ ಕೃತ ಅದ್ಭುತ ಖಂಡಕಾವ್ಯ. ರಾಯರ ಗ್ರಂಥರಚನಾ ಶೈಲಿ ವರ್ಣನೆ ಮಾಡುವ ಗ್ರಂಥ. ಇದರ ನಿಜವಾದ ಅಭಿಪ್ರಾಯ, ಮುಖ್ಯ ಹಾರ್ದ , ಅಭಿಪ್ರಾಯ ತಿಳಿಸುವದಕ್ಕೊಸ್ಕರ ಕರ್ತೃಗಳ ಹತ್ತಿರದಲ್ಲೆ ಇದ್ದು ಅದನ್ನ ತಿಳಿದು , ಜಗತ್ತಿಗೆ ತಿಳಿಸುವದಕ್ಕೋಸ್ಕರ ಶ್ರೀಧೀರೇಂದ್ರರು ವ್ಯಾಖ್ಯಾನ ಮಾಡಿದ್ದಾರೆ.

೨. ಶ್ರೀರಾಘವೇಂದ್ರ ಸ್ತೋತ್ರ ವ್ಯಾಖ್ಯಾನ - ಗ್ರಹಸ್ತಾಶ್ರಮಿಗಳಾದ , ರಾಯರ ಪ್ರೀತಿಯ ಶಿಷ್ಯರಾದ ಅಪ್ಪಣ್ಣಾಚಾರ್ಯ ಕೃತ ರಾಘವೇಂದ್ರ ಸ್ತೋತ್ರಕ್ಕೆ ವ್ಯಾಖ್ಯಾನ.

೩. ಕಾರಕವಾದ - ವಾಕ್ಯಾರ್ಥ ಗ್ರಂಥ

೪. ವಿಷಯವಾಕ್ಯ ಸಂಗ್ರಹ ( ಬ್ರಹ್ಮಸೂತ್ರ ಅಧಿಕರಣ )

೫. ಶ್ರೀಮನ್ಯುಸೂಕ್ತ ವ್ಯಾಖ್ಯಾ - ಮನ್ಯುಸೂಕ್ತಕ್ಕೆ ನರಸಿಂಹ ದೇವರ ಪರ ವ್ಯಾಖ್ಯಾನ.

೬. ಶ್ರೀಮಹಾನಾರಾಯಣೋಪನಿಷದ್ವ್ಯಾಖ್ಯಾ

ಹೀಗೆ ಇನ್ನೂ ಹತ್ತು ಹಲವು ಗ್ರಂಥಗಳನ್ನ ರಚನೆ ಮಾಡಿದ್ದಾರೆ.

*ಶ್ರೀ ಧೀರೇಂದ್ರ ತೀರ್ಥರ ಶಿಷ್ಯ ಸಂಪತ್ತು;*

ಆಗಿನ ಕಾಲದಲ್ಲಿ ವಿದ್ವತ್ಪ್ರಪಂಚದ ಮಿನುಗು ತಾರೆ ಶ್ರೀ ಧೀರೇಂದ್ರರು. ಅವರ ಕೊಡುಗೆ ಅಪಾರ, ಅಪರಿಮಿತ . ಅವರು ಅನೇಕ ಶಿಷ್ಯರನ್ನು ತಯಾರು ಮಾಡಿ ಶ್ರೀವೇದವ್ಯಾಸದೇವರ-ಶ್ರೀಮದಾಚಾರ್ಯರ-ವಾಗ್ದೇವಿಯ-ಶ್ರೀ ಗುರುಸಾರ್ವಭೌಮರ ಸೇವೆ ಮಾದಿದ್ದಾರೆ.ಆಚಾರ್ಯರ ಮುಖ್ಯ ಸಂಸ್ಥಾನದ ಜವಾಬ್ದಾರಿಯನ್ನು ಶ್ರೀ ಧೀರೇಂದ್ರರ ನಂತರ ವಹಿಸಿಕೊಂಡ , ಶ್ರೀಮದಾಚಾರ್ಯರು ೪೦ ಋಕ್ಕುಗಳಿಗೆ ಮಾತ್ರ ಭಾಷ್ಯ ಬರೆದಿದ್ದರೇ ಮುಂದಿನ ಋಕ್ಕು ಗಳಿಗೆ ಆಚಾರ್ಯರ ಅನುಗ್ರಹದಿಂದ ಆಚಾರ್ಯರ ಪರ ಅರ್ಥ ಹೇಳಿದ ಶ್ರೀ ಭುವನೇಂದ್ರ ತೀರ್ಥರು ಶ್ರೀ ಧೀರೇಂದ್ರರ ಶಿಷ್ಯಾಗ್ರಗಣ್ಯರು. ಶ್ರೀಮದಾಚಾರ್ಯ ಮಹಾ ಸಂಸ್ಥಾನವನ್ನು ಶ್ರೀ ಭುವನೇಂದ್ರರ ನಂತರದಲ್ಲಿ ವಹಿಸಿಕೊಂಡ ಶ್ರೀಸುಬೋಧೇಂದ್ರ ತೀರ್ಥರು ( ಪುರ್ವಾಶ್ರಮದಲ್ಲಿ ಮುದ್ದುಕೃಷ್ಣಾಚಾರ್ಯರು) , ಶ್ರೀ ವೆಂಕಟರಾಮಾಚಾರ್ಯರು (ಇವರೇ ಶ್ರೀ ಭುವನೇಂದ್ರ ಸ್ವಾಮಿಗಳಲ್ಲಿ ಸನ್ಯಾಸ ಸ್ವೀಕಾರ ಮಾಡಿದ ಶ್ರೀ ವ್ಯಾಸತತ್ವಜ್ಞ ತೀರ್ಥರು ) ಇವರ ಸಮಕಾಲೀನರಾಗಿ ಇವರನ್ನು ಕಂಡವರೇ. ಇದಲ್ಲದೇ ಶ್ರೀಗಳ ಪೂರ್ವಾಶ್ರಮ ಪುತ್ರರಾದ ರಾಮಾಚಾರ್ಯರು , ರಾಘವೇಂದ್ರಾಚಾರ್ಯರು, ಶ್ರೀನಿವಾಸಾಚಾರ್ಯರು , ಸತಾರೆ ಆಚಾರ್ಯರು ಇವರೆಲ್ಲ ಮಾಧ್ವರಲ್ಲಿ ಪ್ರಮುಖ ಶಿಷ್ಯರು. ಇದಲ್ಲದೇ ಶ್ರೀಗಳವರಲ್ಲಿ ಶ್ರೀವೈಷ್ಣವ ಪಂಥದ ಸುದರ್ಶನಾಚಾರ್ಯರೇ ಮೊದಲಾದ ತ್ರಿಮಸ್ಥ ವಿದ್ವಾಂಸರು ವಿವಿಧ ಶಾಸ್ತ್ರಗಳನ್ನು ಅಭ್ಯಸಿಸಲು ಶ್ರೀಧೀರೇಂದ್ರತೀರ್ಥರಲ್ಲಿಯೇ ಬಂದಿದ್ದಾರೆ.
ಹೀಗೆ ಪರಮವೈರಾಗ್ಯ ಶಿಖಾಮಣಿಗಳಾದ ಶ್ರೀಧೀರೇಂದ್ರ ತೀರ್ಥರ ಚರಿತ್ರೆಯ ಶ್ರವಣ-ಮನನಾದಿಗಳಿಂದ ಹರಿ-ಗುರುಗಳು-ಪ್ರೀತರಾಗುವರು. ಇಂತಹ ಪರಮಭಾಗವತರ ಸೇವೆ-ಸ್ಮರಣಾದಿಗಳು ಸಮಸ್ತ ದೋಷಗಳ ಕುಲವನ್ನೇ ನಾಶಮಾಡುವದು. ರಿತ್ತಿ ಗ್ರಾಮದಲ್ಲಿ ಇಂದಿಗೂ ಜಾಗೃತರಾಗಿ ತಪೋನಿರತರಾಗಿ ಬಂದ ಭಕ್ತರ ಕಷ್ಟಗಳನ್ನೂ ಕಳೆದು ಪೊರೆಯುತ್ತಿರುವ ಶ್ರೀಧೀರೆಂದ್ರರ ವೃಂದಾವನದಲ್ಲಿ ಒಂದಂಶದಿಂದ ಗುರುಸಾರ್ವಭೌಮರು, ತಾವೇ ನಿಂತು ಅನುಗ್ರಹಿಸುತ್ತೇವೆ ಎಂದು ಅಭಯ ನೀಡಿದ್ದಾರೆ. ಅವರು ರಾಯರಾದರೇ , ರಾಯರಕೂಸು ರಿತ್ತಿ ರಾಯರು ಎಂದೇ ಪ್ರಸಿದ್ಧಿ ಪಡೆದರು. ತಮ್ಮ ಸ್ವರೂಪೋದ್ಧಾರಕರೂ , ವೈರಾಗ್ಯಕ್ಕೆ ಕಾರಣರಾದವರೂ , ಪೂರ್ವಾಶ್ರಮ ತಂದೆಗಳೂ , ಪರಮಹಂಸಾಶ್ರಮದಲ್ಲಿ ಪೂರ್ವಿಕ ಗುರುಗಳೂ , ವಿದ್ಯಾಗುರುಗಳೂ ಆದ ,ಶ್ರೀರಾಯರ ಸನ್ನಿಧಾನದಲ್ಲಿ ಅವರ ಪಕ್ಕದಲ್ಲೇ ನೆಲೆಸಿದ ಶ್ರೀ ವಾದೀಂದ್ರ ತೀರ್ಥರ ಮುದ್ದು ವೃಂದಾವನದ ಮಧ್ಯಭಾಗದಲ್ಲಿ ನಿಂದು ಅವರನ್ನ ನಿತ್ಯದಲಿ ಸೇವಿಸುತ್ತ ಅಲ್ಲಿಯೂ ಇರುವವರು. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು.

ಶ್ರೀಮನ್ಮಧ್ವಾಚಾರ್ಯರ ದಿವ್ಯಪರಂಪರೆಯ, ಶ್ರೀರಾಘವೇಂದ್ರಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ, ಮಹಾನಾರಾಯಣೋಪನಿಷದ್ವ್ಯಾಖ್ಯಾ...
15/03/2022

ಶ್ರೀಮನ್ಮಧ್ವಾಚಾರ್ಯರ ದಿವ್ಯಪರಂಪರೆಯ, ಶ್ರೀರಾಘವೇಂದ್ರಸ್ವಾಮಿಗಳವರ ಮಠದ ದಿಗ್ವಿಜಯ ವಿದ್ಯಾ ಸಿಂಹಾಸನಾಧೀಶ್ವರರಾದ,

ಮಹಾನಾರಾಯಣೋಪನಿಷದ್ವ್ಯಾಖ್ಯಾನ,
ಮನ್ಯುಸೂಕ್ತಕ್ಕೆ ನರಸಿಂಹದೇವಪರವ್ಯಾಖ್ಯಾನ,
ಅಂಭೃಣೀಸೂಕ್ತವ್ಯಾಖ್ಯಾನ,
ಪುರುಷಸೂಕ್ತವ್ಯಾಖ್ಯಾನ ,
ಗುರುಗುಣಸ್ತವನಟೀಕಾ ಹಾಗೂ
ಶ್ರೀರಾಘವೇಂದ್ರಸ್ತೋತ್ರವ್ಯಾಖ್ಯಾನ ಮುಂತಾದ ಗ್ರಂಥಗಳನ್ನು ರಚಿಸಿದ ಮಹಾನ್ ಗ್ರಂಥಕಾರರಾದ, ಮಹಾ ತಪಸ್ವಿಗಳಾದ, ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು, ಮುಕುತಿಸೋಪಾನ ಫಲಗಳನ್ನು ಕೊಟ್ಟು ನಮ್ಮೆಲ್ಲರನ್ನು ಅನುಗ್ರಹಿಸುತ್ತಿರುವ

ಶ್ರೀಧೀರೇಂದ್ರತೀರ್ಥಗುರುಸಾರ್ವಭೌಮರ ಆರಾಧನಾ ಮಹೋತ್ಸವ, ಹೊಸರಿತ್ತಿ ಕ್ಷೇತ್ರ, ಹಾವೇರಿ, ಕರ್ನಾಟಕ

Address

Dharwad

Alerts

Be the first to know and let us send you an email when Dvaita Darshana ದ್ವೈತ ದರ್ಶನ posts news and promotions. Your email address will not be used for any other purpose, and you can unsubscribe at any time.

Contact The School

Send a message to Dvaita Darshana ದ್ವೈತ ದರ್ಶನ:

Shortcuts

Share

Category