21/08/2025
ಶರಣೆ ಆಯ್ದಕ್ಕಿ ಲಕ್ಕಮ್ಮ ಮತ್ತು ಶರಣೆ ಕನ್ನಡಿಕಾಯಕದ ರೇಮಮ್ಮ ಅವರುಗಳ ಸ್ಮರಣೆ
ಚಿತ್ರದುರ್ಗ ಆ. 21 - ಎಂದಿಗೂ ಸಾವೇ ಇರದಂತಹ ಮೌಲ್ಯಯುತ ಬದುಕಿನ ನಡೆಗೆ ಬಸವಾದಿ ಶಿವಶರಣೆಯರು ಕೊಟ್ಟಿರುವ ವಚನಗಳು ಚಿರನೂತನ. ಅಂತಹ ಕಾರ್ಯ ಶ್ರೀ ಬೃಹನ್ಮಠದಲ್ಲಿ ನಿರಂತರ ನಡೆದಿದೆ. ಇದರ ಮುಂದುವರಿದ ಭಾಗವಾಗಿ ಮುಂದಿನ ತಿಂಗಳು ನಡೆಯುವ ಶರಣಸಂಸ್ಕೃತಿ ಉತ್ಸವದಲ್ಲಿ ಒಂದುದಿನ 4 ರಿಂದ 5 ಸಾವಿರ ಜನರನ್ನು ಸೇರಿಸಿ ಸಾಮೂಹಿಕ ವಚನ ಪಠಣ ಮತ್ತು ಅದರರ್ಥವನ್ನು ಹೇಳುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಡಿದರು.
ಶ್ರೀಗಳು, ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶ್ರಾವಣಮಾಸದ ಪ್ರಯುಕ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಕರ್ತವಿನ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ವಚನಾಭಿಷೇಕ, ವಚನಪಠಣ ಹಾಗೂ 12ನೇ ಶತಮಾನದ ಆಯ್ದ ಶಿವಶರಣೆಯರ ಜೀವನಸಾಧನೆಯ ಪಥದರ್ಶನದ 27ನೆಯ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತ ಬಸವಾದಿ ಶಿವಶರಣರ ತತ್ತ್ವ ಪ್ರತಿಪಾದನೆಯಲ್ಲಿ ಶ್ರೀಮಠವು ಸದಾ ಮುಂಚೂಣಿಯಲ್ಲಿದೆ. ಈ ಬಗೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಮಹಿಳೆಯರು, ಪುರುಷರು, ಮಕ್ಕಳು ಒಟ್ಟಾರೆ ಆಸಕ್ತ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರು ಭಾಗವಹಿಸಬಹುದಾಗಿದೆ. ನಾಳೆಯಿಂದ ನೋಂದಣಿ ಕಾರ್ಯ ಆರಂಭವಾಗುತ್ತದೆ. ಅದಕ್ಕಾಗಿ ಬಸವಾದಿ ಶಿವಶರಣರ ವಚನಗಳಿಗೆ ಭಾವ ತುಂಬಿ ಹಾಡುತ್ತಿರುವ ಸಂಗೀತ ಕಲಾವಿದ ತೋಟಪ್ಪ ಉತ್ತಂಗಿ ಅವರಿಗೆ ವಹಿಸಲಾಗಿದೆ. ಅವರೊಂದಿಗೆ ಇನ್ನೊಬ್ಬ ಕಲಾವಿದರಾದ ಪರಮರತ್ನ ಸಂಗೀತಶಾಲೆಯ ಸುಜಿತ್ ಕುಲಕರ್ಣಿಯವರಿಗೂ ತಿಳಿಸಲಾಗಿದೆ. ಅದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವ್ಯಕ್ತಿತ್ವ ಕುರಿತು ಮಾತನಾಡಿದ ಗಾನಯೋಗಿ ಸಂಗೀತ ಬಳಗದ ಸದಸ್ಯೆ ಉಮಾರಮೇಶ್ ಮಾತನಾಡಿ, ಈಗಿನ ರಾಚಯೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಅಮರೇಶ್ವರ ಗ್ರಾಮದವರು. ದಲಿತ ಕುಟುಂಬದ ಸ್ವಾಭಿಮಾನಿ ಧೀರಮಹಿಳೆ. ಪತಿ ಆಯ್ದಕ್ಕಿ ಮಾರಯ್ಯ ಬಡತನದಲ್ಲಿ ಹುಟ್ಟಿದ ಈಕೆಗೆ ಸೂಕ್ಷ್ಮಸಂವೇದನೆ ಗಂಭೀರ ಬದುಕನ್ನು ನಡೆಸಲು ಕಲಿಸಿತು. ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಅಮರೇಶ್ವರ ಗ್ರಾಮದಿಂದ ಕಲ್ಯಾಣದತ್ತ ಸಾಗಿ ಅಲ್ಲಿ ಕಠಿಣ ಕಾಯಕ ಮಾಡಿ ಜೀವಿಸುತ್ತ ಯಾರನ್ನು ಬೇಡಬಾರದು ಎಂಬ ಧೈಯದಿಂದ ಲಕ್ಕಮ್ಮ ತನ್ನ ಹಿಡಿಯಕ್ಕಿಯಿಂದ ಸಾವಿರಾರು ಜನರಿಗೆ ನಿತ್ಯದಾಸೋಹ ಮಾಡುವ ಮಹಾಮಣಿಹವನ್ನು ಹೊತ್ತಿದ್ದರು. ಇದೆಲ್ಲವೂ ಭಕ್ತಿಯಿಂದ ಸಾಧ್ಯ ಉಳಿದಿದ್ದೆಲ್ಲವೂ ಮಿಥ್ಯ ಎನ್ನುವ ಧೋರಣೆ ಮತ್ತು ಆತ್ಮವಿಶ್ವಾಸ ದಂಪತಿಗಳದಾಗಿತ್ತು. ಲೋಕೋದ್ಧಾರ ಮತ್ತು ಆತ್ರೋದ್ಧಾರ ಎಂಬ ಆಶಯದೊಂದಿಗೆ ಕಾಯಕ ತತ್ತ್ವ, ನಿಶ್ಚಲನಿಲುವು. ಜ್ಞಾನದ ಅರಿವು, ಸಮತಾಭಾವ, ಇತರರನ್ನು ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲ ಎಂಬ ನಿಲುವು ಆಕೆಯಲ್ಲಿ ನಿರ್ಮಲ ವ್ಯಕ್ತಿತ್ವ ಅನಾವರಣಗೊಳ್ಳಲು ಸಾಧ್ಯವಾಯಿತು. ಇವರ ಸರಳ, ನಿರಾಡಂಬರ ಬದುಕು ಅಂದಿನ ಕಲ್ಯಾಣದ ಶರಣರಲ್ಲಿ ಅಭಿಮಾನ ಮೂಡಿಸಿ ಸೈ ಎನಿಸಿಕೊಂಡಿದ್ದರೆಂದು ಸ್ಮರಿಸಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರೂ ಕದಳಿ ವೇದಿಕೆಯ ಅಧ್ಯಕ್ಷರೂ ಆದ ಶ್ರೀಮತಿ ಎಂ.ಆರ್. ಜಯಲಕ್ಷ್ಮಿ ಅವರು ಶಿವಶರಣೆ ಕನ್ನಡಿಕಾಯಕದ ರೇಮಮ್ಮ ಅವರ ಬಗೆಗೆ ಮಾತನಾಡುತ್ತ, 12ನೇ ಶತಮಾನವೆನ್ನುವುದು ವಚನಯುಗ. ಅಲ್ಲಿ ಜಾತಿ, ಧರ್ಮ, ಮತ, ಪಂಥ, ಪಂಗಡ ಎಣಿಸದೆ ಸಮಸ್ತ ಮನುಕುಲ ಒಂದೇ ಎನ್ನುವಂತಹ ಭಾವ ಸಾರಿದ ಬಸವಣ್ಣನವರು ಮೇಲು-ಕೀಳು ಕಿತ್ತೊಗೆದು ಸ್ತ್ರೀ-ಪುರುಷ ತಾರತಮ್ಯ ಅಳಿಸಿ ಸರ್ವರೂ ಸಮಾನರು ಎಂಬ ಧೋರಣೆಯಿಂದ ಪ್ರಾಣಿ-ಪಕ್ಷಿಗಳಲ್ಲಿಯೂ ದಯೆ ತೋರಿದ ನಿರ್ಮಲ ವ್ಯಕ್ತಿತ್ವದವರಾದ್ದರಿಂದ ಅಲ್ಲಿ ಮೂಢನಂಬಿಕೆ. ಕಂದಾಚಾರವನ್ನು ಹಿಮ್ಮೆಟ್ಟಿಸಲು ಸತತ ಪ್ರಯತ್ನ. ಸಮಾಜದ ಅಂಕುಡೊಂಕು ತಿದ್ದುವ, ಸರ್ವ ಸಮಾಜದವರನ್ನು ಅಪ್ಪಿ ಒಪ್ಪಿಕೊಂಡಿದ್ದರಿಂದ ಅಲ್ಲಿಗೆ ದೇಶ-ವಿದೇಶಗಳಿಂದ ಕಲ್ಯಾಣಕ್ಕೆ ಬಂದರು. ಹಾಗೆಯೇ ಎಲ್ಲ ವರ್ಗದ ಮಹಿಳೆಯರು ವಚನ ಸಾಹಿತ್ಯ ರಚಿಸಿದರು. ನೂರಾರು ಶರಣೆಯರು ಬಂದು ಸೇರಿದರು. ಅದರಲ್ಲಿ ಕನ್ನಡಿ ಕಾಯಕದ ರೇಮಮ್ಮಳು ಒಬ್ಬರಾಗಿದ್ದು, ಈಕೆಯ ಬಗ್ಗೆ ಅಷ್ಟೇನು ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆಕೆಯ ಕುಲಕಸುಬು ಕ್ಷೌರಿಕ ವೃತ್ತಿ ಎಂದು ಗೊತ್ತಾಗುತ್ತದೆ. ನಿರಂಗಲಿಂಗ ಎನ್ನುವ ನಾಮಾಂಕಿತದಲ್ಲಿ ಒಂದು ವಚನ ಲಭ್ಯವಿದೆ. ಆ ವಚನ ಪ್ರತಿಭಟನೆಯ ಸ್ವರೂಪದ್ದಾಗಿದ್ದು, ಯಾವುದನ್ನು ಪ್ರಶ್ನಿಸದೆ ಹಾಗೆಯೇ ತಪ್ಪು ಮಾಡಿದವರನ್ನು ದಂಡಿಸಬೇಕೆಂದು ಆಕೆಯ ವಚನದಲ್ಲಿ ನಿರೂಪಿತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ ಭಾಗವಹಿಸಿ ಮಾತನಾಡುತ್ತ ಕನ್ನಡ ಸಾಹಿತ್ಯಕ್ಕೆ ವಚನಸಾಹಿತ್ಯ ಶ್ರೇಷ್ಠ ಕೊಡುಗೆಯಾಗಿದೆ. ವಚನಸಂಸ್ಕೃತಿ ವಿಜೃಂಭಿಸಿ ಬದುಕು ಅನಾವರಣಗೊಳ್ಳಬೇಕು. ಬಸವಸಂಸ್ಕೃತಿ ಅಭಿಯಾನಕ್ಕೆ ಚಿಕ್ಕಮಗಳೂರಿನಿಂದಲೂ ನಾವು ಸಾವಿರಾರು ಸಂಖ್ಯೆಯಲ್ಲಿ ಚಿತ್ರದುರ್ಗಕ್ಕೆ ಬರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಸ್ಥಾಪಕರು, ಶರಣಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರೂ ಆದ ಕೆ.ಎಂ. ವೀರೇಶ್, ಟಿ.ಪಿ.ಜ್ಞಾನಮೂರ್ತಿ, ಬಸವರಾಜ ಕಟ್ಟಿ, ಮಠದಕುರುಬರಹಟ್ಟಿ ಗ್ರಾ.ಪಂ. ಅಧ್ಯಕ, ಗಣೇಶ್ ಮತ್ತಿತರ ಸದಸ್ಯರು, ಸೇವಾಕರ್ತರಾದ ಕೆ.ಎಂ. ಪ್ರಕಾಶ್, ನೀಲಾಂಬಿಕೆ ಕುಟುಂಬ, ಡಾ|| ಗೌರಮ್ಮ, ಚಳ್ಳಕೆರೆ ಪದವಿ ಕಾಲೇಜಿನ ಪ್ರಾಚಾರ್ಯ ಓ.ಬಾಬು ಹಾಗೂ ಗಾನಯೋಗಿ ಸಂಗೀತ ಬಳಗದವರು ವಹಿಸಿದ್ದರು.
ಈ ಸಂದರ್ಭದಲ್ಲಿ ಗಾನಯೋಗಿ ಸಂಗೀತ ಬಳಗದ ಅಧ್ಯಕ್ಷರಾದ ತೋಟಪ್ಪ ಎಂ. ಉತ್ತಂಗಿ ಅವರ ಬಳಗದ ನೂರಾರು ಗಾಯಕರು, ಬಸವಾದಿ ಶಿವಶರಣೆಯರ ವಚನಗಳನ್ನು ಹಾಡಿ ಮುದ ನೀಡಿದರು. ಬಳಗದ ಕಾವ್ಯದರ್ಶಿ ಜಿ.ಟಿ. ನಂದೀಶ್ ಕಾರ್ಯಕ್ರಮ ನಿರ್ವಹಿಸಿದರು.