19/08/2026
ಹಾಸನ ಜಿಲ್ಲೆಯ ಅಂಬೇಡ್ಕರ್ ವಿದ್ಯಾರ್ಥಿನಿಯರ ಹಾಸ್ಟೆಲ್ಗೆ ಕಾಟ್, ಬೆಡ್, ಕಿಟಕಿ ಪರದೆ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಯಶಸ್ವಿ ಹೋರಾಟ.
ವಿದ್ಯಾರ್ಥಿಗಳ ಸಂಘಟಿತ ಹೋರಾಟಕ್ಕೆ ಸಂದ ಜಯ!!
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಅಪೂರ್ವ ಬಿಲ್ಡಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ತಕ್ಷಣ ಒದಗಿಸುವಂತೆ ಆಗ್ರಹಿಸಿ, ಎಐಡಿಎಸ್ಓ (AIDSO) ನೇತೃತ್ವದಲ್ಲಿ ವಿದ್ಯಾರ್ಥಿನಿಯರು ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿನಿಯರಿಗೆ ಕಿಟಕಿ ಪರದೆಗಳು, ಸ್ಲಿಪ್ಪರ್ ಸ್ಟ್ಯಾಂಡ್, ಮ್ಯಾಟ್, ಮಸ್ಕ್ಯುಟೊ ಕಾಯಿಲ್, ಬೆಡ್ ಹಾಗೂ ಕಾಟ್‌ಗಳಂತಹ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸರಿಯಾದ ಮಲಗುವ ವ್ಯವಸ್ಥೆಯಿಲ್ಲದಿರುವುದರಿಂದ ವಿದ್ಯಾರ್ಥಿನಿಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ವಿದ್ಯಾರ್ಥಿನಿಲಯದಲ್ಲಿ ಸಮರ್ಪಕ ಫ್ಯಾನ್ ವ್ಯವಸ್ಥೆ ಸಹ ಇಲ್ಲ. ಕಿಟಕಿಗಳಿಗೆ ಪರದೆಗಳಾಗಲಿ ಇಲ್ಲದಿರುವುದರಿಂದ ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಿಟಕಿಗಳಿಗೆ ಪರದೆಗಳಿಲ್ಲದ ಕಾರಣ ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿಯೂ ಬೆಡ್‌ಶೀಟ್‌ಗಳನ್ನು ಬಳಸಬೇಕಾದ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯ ವೇಳೆ ಸೊಳ್ಳೆಗಳ ಕಾಟ ಹಾಗೂ ಉಸಿರುಗಟ್ಟುವ ವಾತಾವರಣದಿಂದ ವಿದ್ಯಾರ್ಥಿನಿಯರ ಶಿಕ್ಷಣ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯ ಮೇಲೂ ಪರಿಣಾಮ ಬೀರುತ್ತಿದೆ.
ಈ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರು ಈಗಾಗಲೇ ಹಾಸ್ಟೆಲ್ ವಾರ್ಡನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ಕೈಗೊಂಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿ ವಿದ್ಯಾರ್ಥಿನಿಯರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಹೋರಾಟ ಮತ್ತು ಒತ್ತಡಕ್ಕೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರು ಹಾಗೂ ಉಪ ನಿರ್ದೇಶಕರು ವಿದ್ಯಾರ್ಥಿಗಳ ಮನವಿ ಪತ್ರವನ್ನು ಸ್ವೀಕರಿಸಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು.
ಒಂದು ವಾರದೊಳಗೆ ಕಿಟಕಿ ಪರದೆ, ಸ್ಲಿಪ್ಪರ್ ಸ್ಟ್ಯಾಂಡ್, ಮ್ಯಾಟ್ ಹಾಗೂ ಮಸ್ಕ್ಯುಟೊ ಕಾಯಿಲ್‌ಗಳನ್ನು ವಿದ್ಯಾರ್ಥಿನಿಲಯಕ್ಕೆ ಒದಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಅಲ್ಲದೆ, 110 ಪಿಯು ವಿದ್ಯಾರ್ಥಿಗಳು ಇರುವ ವಿದ್ಯಾರ್ಥಿನಿಲಯಕ್ಕೆ 15 ದಿನಗಳೊಳಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಬೆಡ್ ಒದಗಿಸುವುದಾಗಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಹೋರಾಟ ಮತ್ತು ಒತ್ತಡಕ್ಕೆ ಮಣಿದು ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದು ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ.
ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಖಾತರಿಪಡಿಸಬೇಕು ಹಾಗೂ ಅಧಿಕಾರಿಗಳು ನೀಡಿರುವ ಭರವಸೆಗಳನ್ನು ನಿಗದಿತ ಅವಧಿಯೊಳಗೆ ಈಡೇರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಅಧಿಕಾರಿಗಳು ನೀಡಿರುವ ಭರವಸೆಗಳಂತೆ ಬೇಡಿಕೆಗಳು ನಿಗದಿತ ಅವಧಿಯಲ್ಲಿ ಈಡೇರದಿದ್ದರೆ, ಎಐಡಿಎಸ್ಓ ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಹೋರಾಟ ಸಮಿತಿ ಹೋರಾಟವನ್ನು ಮುಂದುವರಿಸಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.
ಈ ಪ್ರತಿಭಟನಾ ಹೋರಾಟದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರಾದ ಚೈತ್ರಾ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಉಪಾಧ್ಯಕ್ಷರಾದ ಅಭಿಷೇಕ್ ಹಾಗೂ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.