06/08/2026
ನಮ್ಮ ಬಾಲ್ಯದಲ್ಲಿ, ದಾವಣಗೆರೆಯ ವಿದ್ಯಾನಗರದ ನಮ್ಮ ಮನೆಗೆ ಪ್ರತಿ ಮಂಗಳವಾರ 'ಸುಧಾ' ಪತ್ರಿಕೆ ಬರುವುದಕ್ಕೇ ಕಾಯುತ್ತಿದ್ದೆವು. ಶಾಲೆಗೆ ಹೋಗುವ ಮುನ್ನವೇ ಅದನ್ನು ಒಮ್ಮೆಯಾದರೂ ತಿರುಚಿ, ತಿರುವಿ ನೋಡದಿದ್ದರೆ ತೃಪ್ತಿಯೇ ಇರುತ್ತಿರಲಿಲ್ಲ. 'ಫ್ಯಾಂಟಮ್' ಕಾರ್ಟೂನ್, ಧಾರಾವಾಹಿಗಳು, ಹಾಗೂ ನೇಮಿಚಂದ್ರ ಅವರ ಮೇರಿ ಕ್ಯೂರಿ ಜೀವನ ಚರಿತ್ರೆಯ ಸರಣಿ ಓದುತ್ತಲೇ ನನಗೆ ಪುಸ್ತಕಗಳ ಮೇಲಿನ ಪ್ರೀತಿ ಬೆಳೆದದ್ದು. ಅಣ್ಣ-ತಮ್ಮಂದಿರ ಜೊತೆ ಸುಧಾಗಾಗಿ ಕಿತ್ತಾಡುತ್ತಿದ್ದ ದಿನಗಳು ಈಗಲೂ ನೆನಪಾಗುತ್ತವೆ.
ಅಂದಿನಿಂದ ಇಂದಿನವರೆಗೂ ನನ್ನ ನೆಚ್ಚಿನ ಪತ್ರಿಕೆಯಾಗಿದ್ದ 'ಸುಧಾ'ದಲ್ಲಿ, ಇವತ್ತು ನಮ್ಮ ದೇಶಿ ಆಟಗಳ ಪುನರುಜ್ಜೀವನದ ಪಯಣದ ಬಗ್ಗೆ ಲೇಖನ ಬಂದಿರುವುದು ಮತ್ತಷ್ಟು ಖುಷಿ ತಂದಿದೆ. ಭಾರತದ ಸಾಂಪ್ರದಾಯಿಕ ಆಟಗಳನ್ನು ಮತ್ತೆ ಮುನ್ನೆಲೆಗೆ ತರಲು ನಾವು ಪಡುತ್ತಿರುವ ಪರಿಶ್ರಮ, ಮಾಹಿತಿ ಸಂಗ್ರಹಣೆ , ಸಂಬಂಧಿತ ಸುತ್ತಾಟಗಳನ್ನು ಅತ್ಯಂತ ಸವಿವರವಾಗಿ ಪ್ರಕಟಿಸಿದ್ದಾರೆ.
ಕೇವಲ ಮನೋರಂಜನೆ ಮಾತ್ರವಲ್ಲದೆ, ಈ ಸಾಂಪ್ರದಾಯಿಕ ಆಟಗಳ ಮೂಲಕ "ಮನೋರಂಜನೆಯಿಂದ ಮನೋವಿಕಾಸ" ಸಾಧ್ಯ ಎಂಬ ನಂಬಿಕೆ ನಮ್ಮದು. ಈ ಸುಂದರವಾದ ಧ್ಯೇಯವಾಕ್ಯವನ್ನು ನಮಗೆ ಸೂಚಿಸಿದ ಶ್ರೀ ರವಿಶಂಕರ್ ಅವರಿಗೆ ನಮ್ಮ ವಿಶೇಷ ಪ್ರಣಾಮಗಳು.
ನಮ್ಮ ಈ ಪುಟ್ಟ ಪ್ರಯತ್ನವನ್ನು ಗುರುತಿಸಿ, ಅಚ್ಚುಕಟ್ಟಾಗಿ ಲೇಖನ ಮೂಡಿಸಿದ ಮಹೇಶ್ ಭಗೀರಥ ಅವರಿಗೆ, ಸುಂದರ ಚಿತ್ರಗಳನ್ನು ಸೆರೆಹಿಡಿದ ಅನೂಪ್ ಅವರಿಗೆ, ಲೇಖನ ಮೂಡಿಬರಲು ಕಾರಣರಾದ ರಶ್ಮಿ ಹಾಗೂ ಇಡೀ 'ಸುಧಾ' ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.
ಇನ್ನು ಹೆಚ್ಚು ಹೇಳುವುದಿಲ್ಲ, ಒಮ್ಮೆ ಈ ಲೇಖನವನ್ನು ಓದಿ, ನಿಮ್ಮ ಪ್ರೀತಿ-ಅನಿಸಿಕೆಯನ್ನು ಹಂಚಿಕೊಳ್ಳಿ. ಜೊತೆಗೆ ಇವತ್ತೇ ಒಂದು ದೇಶಿ ಆಟವನ್ನು ಆಡಿ, ಮತ್ತೆ ನಿಮ್ಮ ಬಾಲ್ಯದ ನೆನಪುಗಳಿಗೆ ಮರಳಿಬಿಡಿ!